ಜಿಲ್ಲಾ ಸುದ್ದಿಗಳು
ಶಿರಸಿ
ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ಹಬ್ಬಹುಣ್ಣಿಮೆಗಳು ಜನಸಂದಣಿ ಆಗುವಂಥ ಎಲ್ಲ ಕಾರ್ಯಕ್ರಮಗಳನ್ನು ರದ್ಧುಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.ಅವರು ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಮುರ್ಡೇಶ್ವರ ರಥೋತ್ಸವ, ಯಲ್ಲಾಪುರ ಜಾತ್ರೆಯನ್ನು ಈ ವರ್ಷವೂ ಮುಂದೆ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲ ಕಡೆ 5 ಮಕ್ಕಳಿಗಿಂದ ಹೆಚ್ಚಿನ ಶಾಲೆಯಲ್ಲಿ ಕೋವಿಡ್ ಬಂದರೆ ಅಂಥ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಕೋವಿಡ್ ಶಕ್ತಿ ಮೊದಲಿಗೆ ಹೋಲಿಸಿದರೆ ಕೋವಿಡ್ ಲಸಿಕೆಯಿಂದ ಶಕ್ತಿ ಕುಂದಿದೆ. ಕೋವಿಡ್ ಬಗ್ಗೆ ಜನರೇ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಈ ಜೊತೆಗೆ ಸರಕಾರವೂ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಈ ಹಿಂದಿನ ಕೋವಿಡ್ ಸಂದರ್ಭದಲ್ಲಿ ಶೇ. 80 ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಬಂದವರಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ. 10 ರಷ್ಟಿದೆ ಎಂದ ಅವರು, ಜನರಲ್ಲಿ ಕೋವಿಡ್ ಬಗ್ಗೆ ಇರುವ ಅತೀಯಾದ ಭಯವೂ ಈಗ ಹೋಗಿದೆ. ಕೋವಿಡ್ ಬಂದರೆ ಅದನ್ನು ಎದುರಿಸುವ ಕ್ರಮವನ್ನು ಜನರು ಕಲಿತುಕೊಂಡಿದ್ದಾರೆ. ಆದರೂ ಕೋವಿಡ್ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಆದರೆ ಭಯಭೀತರಾಗಬಾರದು ಎಂದರು.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಯಾವ ಸಂದರ್ಭದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿಗಳಿಗೆ ತಿಳಿದಿದೆ. ಅದಕ್ಕೆ ಅನುಗುಣವಾಗಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ಬನವಾಸಿ ಪ್ರಾಧಿಕಾರಕ್ಕೆ ಒಮ್ಮೆ 5 ಕೋಟಿ ರೂ ಬಿಡುಗಡೆ ಆದ ನಂತರ ಕೋವಿಡ್ ಹಿನ್ನೆಲೆಯಲ್ಲಿ ಮತ್ತೆ ಹಣ ಬಿಡುಗಡೆಯಾಗಿಲ್ಲ. ಈ ಬಾರಿ ಕದಂಬೋತ್ಸವ ಹಾಗೂ ಕರಾವಳಿ ಉತ್ಸವ ಮಾಡಬೇಕು ಎನ್ನುವ ಹಂಬಲ ಇತ್ತು. ಆದರೆ ಕೋವಿಡ್ ಮತ್ತೆ ಒಕ್ಕರಿಸಿದ ಹಿನ್ನೆಲೆಯಲ್ಲಿ ಯಾವ ಉತ್ಸವಗಳು ನಡೆಯುವುದು ಅನುಮಾನ ಎಂದರು.
ಬನವಾಸಿಯಲ್ಲಿ ಪವರ್ ಗ್ರಿಡ್ : ಬನವಾಸಿಯಲ್ಲಿ ಪವರ್ ಗ್ರಿಡ್ ನಿರ್ಮಾಣಕ್ಕೆ ಹಸಿರುನಿಶಾನೆ ತೋರಲಾಗಿದ್ದು, ಸಧ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಪವರ್ ಗ್ರಿಡ್ ಸ್ಥಾಪನೆಗೆ ಅಂದಾಜು 10 ಕೋಟಿ ರೂ ಹಣ ಮಂಜೂರಿಯಾಗಿದೆ. ಈ ಪವರ್ ಗ್ರಿಡ್ ಕಾಮಗಾರಿಯನ್ನು ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ ಸರ್ವೀಸ್ ತೆಲಂಗಾಣ ಸಂಸ್ಥೆಗೆ ಟೆಂಡರ್ ಆಗಿದ್ದು, ಶ್ರೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಇಂಧನ ಸಚಿವ ಸುನೀಲ್ ಕುಮಾರ್ ಅವರನ್ನು ಕರೆಸಿ ಉದ್ಘಾಟನೆ ಮಾಡಿಸಲಾಗುವುದು ಎಂದು ಮಾಹಿತಿ ನೀಡಿದರು.
Be the first to comment