ರಾಜ್ಯ ಸುದ್ದಿಗಳು
ದೇವನಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳು ಇಲ್ಲದಿದ್ದರೂ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಭಾಗದ ಕೆರೆ, ಕುಂಟೆ, ಬಾವಿಗಳು ತುಂಬಿ ಕೋಡಿ ಹರಿಯುತ್ತಿರುವ ಪರಿಣಾಮ ಕೃಷಿ ಹೊಂಡಗಳಲ್ಲಿ, ರಾಜಕಾಲೂವೆಗಳಲ್ಲಿ ನೀರಿನ ಕೊರತೆಯಾಗದಿರುವುದರಿಂದ ಹರಿಯುವ ನೀರಲ್ಲಿಯೇ ಬಂಗಾರದಂತಹ ಭತ್ತವನ್ನು ರೈತರು ಬೆಳೆದು ಜಿಲ್ಲೆಗೆ ಮಾದರಿಯಾಗಿದ್ದಾರೆ.ಜಿಲ್ಲೆಯಲ್ಲಿ ಭತ್ತ ಬೆಳೆಯುವ ರೈತರನ್ನು ಗುರ್ತಿಸುವ ಕೆಲಸ ಮಾಡಬೇಕು. ಸರಕಾರದಿಂದ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರೆ ಕೆರೆ-ಕುಂಟೆ ಆಸುಪಾಸಿನ ಸಾವಿರಾರು ರೈತರು ಭತ್ತ ಬೆಳೆಯಲು ಮುಂದಾಗುತ್ತಾರೆ. ಸರಕಾರದಿಂದ ಬೀಜ ಮತ್ತು ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡಿದರೆ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಭತ್ತ ಬೆಳೆಗೆ ಸಾಕಷ್ಟು ನೀರು ಬೇಕಾಗಿರುವುದರಿಂದ ನೀರಿನ ಕೊರತೆ ಆಗದಂತೆ ಸರಕಾರ ಯೋಜನೆ ರೂಪಿಸಿ ಈ ಭಾಗದಲ್ಲಿ ಶಾಶ್ವತ ನೀರು ಹರಿಸಿದರೆ ಇತರೆ ರಾಜ್ಯಗಳಿಗೆ ಭತ್ತದ ಅವಲಂಬನೆ ತಪ್ಪಲಿದ್ದು, ಸ್ವಂತಿಕೆಯಿಂದ ರೈತರು ಯತೇಚ್ಛವಾಗಿ ಭತ್ತ ಬೆಳೆಯಲು ಸಹಕಾರಿಯಾಗುತ್ತದೆ ಎಂದು ರೈತರು ಹೇಳುತ್ತಾರೆ.
ಭತ್ತದ ಖರೀದಿಗೂ ಸರಕಾರ ಮುಂದಾಗಬೇಕು. ಸ್ಥಳೀಯವಾಗಿ ಭತ್ತ ಬೆಳೆಯಲು ಮುಖ್ಯವಾಗಿ ಬೇಕಾಗಿರುವ ಬೀಜ ಮತ್ತು ಗೊಬ್ಬರ ಅಭಾವದ ನಡುವೆ ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಬೀಜಗಳನ್ನು ತರೆಸಿಕೊಂಡು ಭತ್ತ ಬೆಳೆಯಲಾಗುತ್ತಿದೆ. ಕರೆ ಕುಂಟೆಗಳಲ್ಲಿ ನೀರು ತುಂಬಿರುವುದರಿಂದ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಕೃಷಿ ಅಧಿಕಾರಿಗಳು ರೈತರನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಈ ಭಾಗದಲ್ಲಿ ರಾಗಿಗೆ ಎಷ್ಟು ಮಹತ್ವ ನೀಡುತ್ತಾರೆಯೋ ಅಷ್ಟೇ ಭತ್ತಕ್ಕೂ ಸಹ ಮಹತ್ವ ಸಿಗಲಿದೆ. ಸಾಮಾನ್ಯವಾಗಿ ರಾಜ್ಯದ ಬಳ್ಳಾರಿ, ರಾಯಚೂರು ಮತ್ತು ಸಿಂದಗಿ ಪ್ರದೇಶಗಳಲ್ಲಿ ಹೆಚ್ಚು ಭತ್ತ ಬಳೆಯುವ ರೈತರನ್ನು ಕಾಣಬಹುದು. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಸಹ ಭತ್ತ ಬೆಳೆಗಾರರು ಸಾಕಷ್ಟು ಇರುವುದರಿಂದ ಅವರಿಗೆ ಕೃಷಿ ಇಲಾಖೆಯ ಸಚಿವರು ಉತ್ತಮ ಯೋಜನೆಯನ್ನು ರೂಪಿಸಿ, ರೈತರಿಗೆ ಭತ್ತ ಬೆಳೆಯಲು ಬೇಕಾಗುವಂತಹ ಮೂಲ ಸೌಕರ್ಯಗಳನ್ನು ಒದಗಿಸಿದರೆ ಇಲಾಖೆಯಿಂದ ರೈತರು ಪಡೆದುಕೊಂಡು ಸಮೃದ್ಧ ಬೆಳೆಯನ್ನು ಇಡಲು ಅನುಕೂಲವಾಗಲಿದೆ ಎಂದು ಭತ್ತ ಬೆಳೆದ ರೈತರ ಅಭಿಪ್ರಾಯವಾಗಿದೆ.
…………………………………………………………..
*ಪ್ರಮುಖಾಂಶಗಳು*
-ಬರಪೀಡಿತ ಜಿಲ್ಲೆಯಲ್ಲಿ ಬಂಗಾರದಂತಹ ಭತ್ತ ಬೆಳೆದು ಮಾದರಿ.-ಗುಣಮಟ್ಟದ ಭತ್ತ ಬೆಳೆಯಲು ಸರಕಾರದಿಂದ ಬೇಕಿದೆ ಸೌಲಭ್ಯಭತ್ತ ಖರೀದಿಗೆ ಸರಕಾರ ಮುಂದಾಗಲು ರೈತರ ಒತ್ತಾಯ.-ಹರಿವ ನೀರನ್ನು ಬಳಸಿ ಉತ್ತಮ ಇಳುವರಿ ಕಂಡ ಜಿಲ್ಲೆಯ ರೈತರು.-ನೀರಿನ ಅಭಾವದಲ್ಲಿಯೂ ಭತ್ತ ಬೆಳೆಯಲು ಸರಕಾರ ಯೋಜನೆ ರೂಪಿಸಬೇಕು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 162 ಹೆಕ್ಟೇರು ಪ್ರದೇಶದಲ್ಲಿ ಶೇ.55.6 ರಷ್ಟು ಭತ್ತವನ್ನು ಬೆಳೆಯಲಾಗಿದೆ. ದೇವನಹಳ್ಳಿ ತಾಲೂಕಿನಲ್ಲಿ 33 ಹೆ., ಹೊಸಕೋಟೆ ತಾಲೂಕಿನಲ್ಲಿ 57 ಹೆ., ನೆಲಮಂಗಲ ತಾಲೂಕಿನಲ್ಲಿ 55ಹೆ., ದೊಡ್ಡಬಳ್ಳಾಪುರ ತಾಲೂಕಿನಲ್ಲಿ 17 ಹೆ. ನಷ್ಟು ಬೆಳೆಯಲಾಗಿದೆ ಎಂದು ಪ್ರಕಾರ ಕೃಷಿ ಇಲಾಖಾ ಅಧಿಕಾರಿಗಳ ಮಾಹಿತಿಯಾಗಿದೆ.
………………………………………………………….
ಹರಿವ ನೀರನ್ನು ಬಳಸಿಕೊಂಡು ಸ್ವಂತಹ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿಟ್ಟು ಭತ್ತವನ್ನು ಬೆಳೆದಿದ್ದೇವೆ. ಉತ್ತಮ ಇಳುವರಿ ಬಂದಿರುತ್ತದೆ. ಈ ಭಾಗದಲ್ಲಿ ಯಾವುದೇ ನದಿಮೂಲಗಳು ಇಲ್ಲದಿದ್ದರೂ ಮಳೆಯಾಶ್ರಿತವಾಗಿ ಇರುವ ನೀರಾವರಿಯನ್ನು ಬಳಸಿಕೊಂಡು ಭತ್ತವನ್ನು ಬೆಳೆಯಲಾಗಿದೆ. ಸರಕಾರ ಜಿಲ್ಲೆಗೆ ಶಾಶ್ವತ ನೀರಾವರಿ ಮತ್ತು ಸಬ್ಸಿಡಿಯಲ್ಲಿ ಭತ್ತಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.
– ಎನ್.ನಂಜೇಗೌಡ | ರೈತ, ಕೊಯಿರ ಹೊಸೂರು
………………………………………………………….
ನೀರಿನ ಮೂಲಗಳು ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀರ ಕಡಿಮೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 162 ಹೆ.ನಷ್ಟು ಭತ್ತವನ್ನು ಬೆಳೆಯಲಾಗುತ್ತಿದೆ. ಭತ್ತ ಬೆಳೆಯಲು ನೀರಾವರಿ ವ್ಯವಸ್ಥೆ ಇದ್ದರೆ ಇಲಾಖೆಯಿಂದ ಸೌಲಭ್ಯ ಪಡೆದುಕೊಳ್ಳಬಹುದು. ಭತ್ತ ಬೆಳೆಯುವ ರೈತರು ಕೃಷಿ ಇಲಾಖೆಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
– ಡಾ.ಗಿರೀಶ್ | ಜಿಲ್ಲಾ ಜಂಟಿ ನಿರ್ದೇಶಕರು, ಕೃಷಿ ಇಲಾಖೆ
Be the first to comment