ಅವಘಡಕ್ಕೆ ಗಳಿಗೆ ಎಣಿಸುತ್ತಿರುವ ಅರ್ಧ ಶತಮಾನದ ಹೊನ್ನಾವರ ಪಟ್ಟಣದ ಕೆಳಸೇತುವೆ …..!!! 

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ

ತಾಲೂಕಿನ ಶ್ರೀದೇವಿ ಆಸ್ಪತ್ರೆಯ ಎದುರಿನ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು , ಇದನ್ನು ಆಲಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಮಾತ್ರ ದುರಾದೃಷ್ಟವೇ ಸರಿ.ಕೆಳಸೇತುವೆ ನಿರ್ಮಾಣ ಮಾಡಿ 50 ಕ್ಕೂ ಅಧಿಕ ವರ್ಷ ಕಳೆದಿದೆ, ಆದರೆ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ನಿರ್ವಹಣೆ ಕಾರ್ಯ ಮಾಡಿಲ್ಲ. ನಿತ್ಯ ಸಂಚಾರದ ಭಾರ ತಾಳಲಾರದ ಸೇತುವೆ ಯಾವ ಸಂದರ್ಭದಲ್ಲಾದರೂ ಘೋರ ಅನಾಹುತಕ್ಕೆ ಎಡಮಾಡಿ ಕೊಡುವ ಸಾಧ್ಯತೆಗಳು ಬಹಳಷ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಅನಾಹುತ ಸಂಭವಿಸಿದ ನಂತರವೇ ಎಚ್ಚೆತ್ತುಕೊಳ್ಳುತ್ತಾರೇನೋ ಎನ್ನುವಂತಾಗಿದೆ.

CHETAN KENDULI

ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಶರಾವತಿ ಸಮೀಪ ಕೆಳಗಿನ ಪಾಳ್ಯ ರಸ್ತೆಯಿಂದ ಹಿಡಿದು ಬಂದರ್ ರಸ್ತೆಯವರೆಗೂ ಕೆಳಸೇತುವೆ ನಿರ್ಮಾಣವಾಗಿದೆ. 1966 ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಭೂಸ್ವಾಧೀನ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು ಆದರೆ ಈ ಕೆಳಸೇತುವೆ ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಸಮುದ್ರ ಹಾಗೂ ಶರಾವತಿ ನದಿಯ ಸಂಗಮದ ಸಮೀಪವೇ ಇರುವುದರಿಂದ ಲವಣಾಂಶಕ್ಕೆ, ಹವಾಮಾನಕ್ಕೆ ಸೇತುವೆಗೆ ಅಳವಡಿಸಿರುವ ಕಬ್ಬಿಣದ ಸರಳುಗಳಿಗೆ ತುಕ್ಕು ಹಿಡಿದಿದೆ ಇದರಿಂದ ಸೇತುವೆ ಬಿರುಕು ಬಿಟ್ಟಿದ್ದು ಮುಂದೆ ದೊಡ್ಡ ಅನಾಹುತಕ್ಕೆ ಎಡೆಮಾಡಿ ಕೊಡುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.

ಇದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಭಾರೀ ಪ್ರಮಾಣದ ವಾಹನಗಳು ಸಂಚರಿಸುತ್ತವೆ. ಶರಾವತಿ ನದಿಗೆ ಅಡ್ಡವಾಗಿ ಹೊಸ ಸೇತುವೆ ನಿರ್ಮಿಸಿ ಹಲವು ವರ್ಷಗಳು ಕಳೆದರೂ ಹಳೇ ಸೇತುವೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸದೇ ಇರುವುದು ಇದಲ್ಲದೇ ಒಂದೇ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಖಾಸಗಿ ಖಂಪನಿಗೆ ಗುತ್ತಿಗೆ ನೀಡಿರುವುದರಿಂದ ಹೆದ್ದಾರಿ ಪ್ರಾಧಿಕಾರದವರು ಯಾವುದೇ ನಿಗಾ ವಹಿಸದೇ ಇದ್ಯಾವುದೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಾಗಿದ್ದು ಒಂದು ವೇಳೆ ಸೇತುವೆ ಕುಸಿದರೆ ಹೆದ್ದಾರಿಗೆ ಸಂಪರ್ಕಿಸುವ ಸಂಚಾರವೇ ಸ್ಥಗಿತಗೊಳ್ಳಬಹುದು. ಅದಲ್ಲದೇ ಕೆಳಗಡೆ ಸಂಚಾರ ಮಾಡುವವರ ಮೇಲೆ ಸೇತುವೆ ಕುಸಿದು ಬಿದ್ದರೆ ಅವರ ಪ್ರಾಣಕ್ಕೆ ಯಾರು ಹೊಣೆ ?? ಹೊಸ ಸೇತುವೆ ನಿರ್ಮಾಣವಷ್ಟೇ ಆಗಿದೆ ಆದರೆ ಸಂಚರಿಸುವ ಶ್ರೀದೇವಿ ಸಮೀಪದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಯಾವಾಗ ಬೇಕಾದರೂ ಅಪಘಾತ ಸಂಭವಿಸುವ ಸಾಧ್ಯತೆಗಳೂ ಬಹಳಷ್ಟಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳುವುದು ಅನಿವಾರ್ಯವಾಗಿದೆ.

Be the first to comment

Leave a Reply

Your email address will not be published.


*