ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣ ಸೇರಿದಂತೆ ತಾಲೂಕುಯಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಯೇಸುವಿನ ಜನ್ಮದಿನಾಚರಣೆ ಪ್ರಯುಕ್ತ ನಗರದ ಹಲವು ಚರ್ಚ್‌ಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಹೊಸ ವರ್ಷಕ್ಕೂ ಮುಂಚಿತವಾಗಿ ಬರುವ ಕ್ರಿಸ್‌ಮಸ್ ಹಬ್ಬವನ್ನು ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಡಿಸೆಂಬರ್ ಆರಂಭವಾಗುತ್ತಿದ್ದಂತೆ ಬಹುತೇಕ ಎಲ್ಲಾ ಕ್ರೈಸ್ತರ ಮನೆ ಮನೆಗಳಲ್ಲೂ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಅದರಂತೆ ಶನಿವಾರ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನೂರಾರು ಭಕ್ತರು ಬೆಳಗ್ಗೆಯಿಂದಲೇ ಚರ್ಚ್‌ಗಳಿಗೆ ಬಂದು ಯೇಸುವಿನ ಆರಾಧನೆ ಮಾಡುವ ಮೂಲಕ ಕ್ರಿಸ್‌ಮಸ್ ಹಬ್ಬ ಆಚರಣೆ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕ್ರಿಸ್‌ಮಸ್ ಹಬ್ಬದ ದಿನ ಪ್ರಮುಖವಾಗಿ ಯಾವುದೇ ಆಹಾರ ಸೇವಿಸದೇ ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನ ಯೇಸುವಿನ ಆರಾಧನೆಯಲ್ಲಿ ತೊಡಗಿ ಮತ್ತು ಯೇಸುವಿನ ದರ್ಶನ ಪಡೆದರೆ ಪಾಪ ಪರಿಹಾರವಾಗಿ ಸಮೃದ್ಧಿ ಉಂಟಾಗುತ್ತದೆ ಎಂಬುದು ಕ್ರೈಸ್ತ ಭಕ್ತರ ನಂಬಿಕೆಯಾಗಿದೆ. ಬೆಳಗ್ಗೆಯಿಂದಲೇ ಭಕ್ತರು ಚರ್ಚ್‌ಗಳಿಗೆ ತೆರಳಿ ಯೇಸುವಿನ ಆರಾಧನೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಲಿಂಗಸೂಗುರು ರಸ್ತೆ ಇರುವಂತಹ ಸಂತ ಜಾನರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆಯ ಸಂಭ್ರಮ ಮನೆಮಾಡಿತ್ತು. ಚರ್ಚ್‌ನಲ್ಲಿ ಗೋದಲಿ ತಯಾರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಚರ್ಚ್‌ಗೆ ಆಗಮಿಸಿದ ನೂರಾರು ಭಕ್ತಾಧಿಗಳು ಪೂಜೆ ಪುರಸ್ಕಾರಗಳಲ್ಲಿ ತೊಡಗಿ, ಶ್ರದ್ಧಾಭಕ್ತಿಯಿಂದ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಕ್ರಿಸ್‌ಮಸ್ ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಇದೇ ಸಂದರ್ಭದಲ್ಲಿ ಸಂತ ಜಾನರ ಚರ್ಚ್ ಮಸ್ಕಿ ವಿಚಾರಣಾ ಗುರುಗಳಾದ ಫಾ. ಚಾರ್ಲಸ್ ಸುಂದರರಾಜ್, ಸಹಾಯಕ ಗುರುಗಳಾದ ಚಂದ್ರಕಾಂತ್, ಅಮರ ಪ್ರೇಮಾಶ್ರಮ ಕಾನ್ವೆಂಟ್ ನ ಸಿಸ್ಟರ್ಸ್, ಹಾಗೂ ಧರ್ಮ ಕೇಂದ್ರದ ಸರ್ವ ಸದ್ಭಕ್ತರು ಇದ್ದರು.
Be the first to comment