ರಾಜ್ಯ ಸುದ್ದಿಗಳು
ಬೆಳಗಾವಿ
ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಸಂಜು ಗುರವ್, ಸಚಿನ ಗುರವ್ ಹಾಗೂ ಗಣೇಶ್ ಪೆಡ್ನೆಕರ್ ಎಂದು ಗುರುತಿಸಲಾಗಿದೆ.ಮೂವರು ಆರೋಪಿಗಳು ನಿನ್ನೆ (ಡಿ.20) ರಾತ್ರಿ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜ ಸುಟ್ಟುಹಾಕಿದ್ದರು.ಭಾರತೀಯ ದಂಡಸಂಹಿತೆ 153 ಎ, 295, 427, 120ಬಿ ಅಡಿಯಲ್ಲಿ ನಂದಗಡ ಪೊಲೀಸ್ ಠಾಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಪುಂಡರು ಕಳೆದ ಕೆಲವು ದಿನಗಳಿಂದ ಕನ್ನಡಿಗರ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದ್ದಾರೆ. ಕನ್ನಡ ಧ್ವಜ ಸುಡುವುದು, ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸುವುದು ಮತ್ತು ಬಸವಣ್ಣನ ಫೋಟೋಗೆ ಮಸಿ ಬಳಿಯುವುದು ಸೇರಿದಂತೆ ಕನ್ನಡಿಗರನ್ನು ಕೆರಳಿಸುವ ಅನೇಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ.
ಸದ್ಯ ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇದರ ನಡುವೆ ಎಂಇಎಸ್ ಅನ್ನು ಬ್ಯಾನ್ ಮಾಡುವಂತೆ ಕನ್ನಡಪರ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದ್ದು, ಬೆಳಗಾವಿಯಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಮುಂದುವರಿದಿದೆ.
Be the first to comment