ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಈಗಾಗಲೇ ಅರಣ್ಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಹಿನ್ನಡೆಯಾಗಿತ್ತು ಎಂದು ಅರಣ್ಯ ಮತ್ತು ಪರಿಸರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದರು.ಖಾಸಗಿ ಕಾರ್ಯಕ್ರಮದ ನಿಮಿತ್ತ ತಮ್ಮ ಕುಟುಂಬದೊಂದಿಗೆ ಯಲ್ಲಾಪುರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.ಹೈಕೋರ್ಟ್, ವನ್ಯಜೀವಿ ಮಂಡಳಿಯಿಂದ ಸಾಧಕ ಬಾಧಕದ ವರದಿ ಕೇಳಿರುವುದು ಪರಿಸರವಾದಿಗಳಿಗೆ ಹಿನ್ನಡೆಯಾಗಿದೆ. ಮಂಡಳಿಯು ಯೋಜನೆಗೆ ಪೂರಕ ವರದಿಯನ್ನು ನೀಡಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ. ಅದಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಾಪಿಸಲು ಯಾರಾದರೂ ಉದ್ಯಮಿಗಳು ಮುಂದೆ ಬಂದರೆ ಅವರಿಗೆ ಅರಣ್ಯ ಇಲಾಖೆ ಎಲ್ಲ ಸಹಕಾರ ನೀಡಲಿದೆ ಎಂದು ತಿಳಿಸಿದರು.ಅರಣ್ಯ ಹಕ್ಕು ಪಡೆಯಲು 1980ರ ಪೂರ್ವದ ದಾಖಲೆ ಪೂರೈಸಿ, ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ನೀಡಲು ತೊಡಕಾಗುತ್ತಿದೆ. ಕೆಲವೆಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಮಾನವೀಯ ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಇಲಾಖೆಯಿಂದ ಸೂಚನೆ ನೀಡಬೇಕು ಎಂದು ವನವಾಸಿ ಕಲ್ಯಾಣದ ಪ್ರಮುಖರು ವಿನಂತಿಸಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುನೀಡಲು 1980ರ ಪೂರ್ವದ ದಾಖಲೆಗಳನ್ನು ಪೂರೈಸಿ ಅದನ್ನು ಅರಣ್ಯ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಜೈಲಿಗೆ ಹೋದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರೆ ಇಲಾಖೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಬೇರೆ ಯಾವುದೇ ಪ್ರಕರಣವಾದರೆ ಅದನ್ನು ಪರಿಶೀಲಿಸಬಹುದು ಎಂದರು.ಈ ಸಂದರ್ಭದಲ್ಲಿ ಎಮ್.ಎಲ್.ಸಿ ಶಾಂತರಾಮ್ ಸಿದ್ದಿ ಹಾಗೂ ಇತರೆ ಪ್ರಮುಖರು ಹಾಜುರಿದ್ದರು.
Be the first to comment