ಜಿಲ್ಲಾ ಸುದ್ದಿಗಳು
ಮಸ್ಕಿ
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ಪತ್ರಿಕಾ ರಂಗದಲ್ಲಿ ಮಾಡಿದ ಗಣನೀಯ ಸೇವೆ ಮಾಡಿದ ಸಾಧಕರಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡಮಾಡಲ್ಪಡುವ ಪತ್ರಿಕೋದ್ಯಮ ರತ್ನ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಸಾಹಿತಿ,ಉಪನ್ಯಾಸಕ,ಹಾಗೂ ಚಲನಶೀಲ ಪಾರದರ್ಶಕ ಪತ್ರಕರ್ತ ಸುರೇಶ ಬಳಗಾನೂರು ರವರು ಆಯ್ಕೆಯಾಗಿದ್ದಾರೆ.ಅವರಿಗೆ ಈ ಪ್ರಶಸ್ತಿಯನ್ನು ಡಿಸೆಂಬರ್ ಐದನೇ ತಾರೀಕಿನಂದು ಬೆಂಗಳೂರಿನ ಜೆ,ಸಿ, ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆಯುವಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ 2020 –22 ನೇ ಸಾಲಿನ ರಾಜ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿಸುರೇಶ ಬಳಗಾನೂರು ರವರಿಗೆ ಪತ್ರಿಕೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವದು.ಇವರ ಈ ಸಾಧನೆಗೆ ನಾಡಿನೆಲ್ಲೆಡೆಯಿಂದ ಹಿತೈಸಿಗಳು, ಶಿಷ್ಯಬಳಗ, ಸ್ನೇಹಿತರು,ಸಹೃದಯಿ ಪತ್ರಕರ್ತಮಿತ್ರರು, ಸಂಘಟಕರು, ಸಮಾಜಸೇವಕರು ಕನ್ನಡಪರ ಹೋರಾಟಗಾರರು ಶುಭಾಷಯಕೋರಿ ಅವರ ಬೆಳವಣಿಗೆ ಹೀಗೆ ಮುಂದುವರೆಯಲೆಂದು ಹೃದಯತುಂಬಿ ಹರಸಿದ್ದಾರೆ.
ಇವರಿಗೆ ಹತ್ತನೆ ತರಗತಿಯಿದ್ದಾಗಲೇ ಹನಿಗವನಗಳನ್ನು ಬರೆಯುವ ಹವ್ಯಾಸ ಅಂಬೆಗಾಲಿಡಲಾರಂಭಿಸಿತು. ಅದು ಕ್ರಮೇಣಬೆಳೆದು ಕಾಲೇಜುಹಂತಕ್ಕೂ ಮುಂದುವರೆಯಿತು.ಪಿ.ಯು.ಸಿ ಯಲ್ಲಿ ಇತಿಹಾಸದ ಉಪನ್ಯಾಸಕರಾದ ಶ್ರೀ ಮಾನಪ್ಪ ರವರು ಸುರೇಶರವರ ಕವಿತೆ ರಚನಾ ಹವ್ಯಾಸವನ್ನು ಗಮನಿಸಿ ಅವರ ತರಗತಿಯ ಕೊನೆಯ ಹತ್ತು ನಿಮಿಷಗಳನ್ನು ಕವನವಾಚನಮಾಡಲು ಅವಕಾಶ ನೀಡಿದರು. ಆ ಸಂದರ್ಭದಲ್ಲಿ ವರನಟ ಡಾ.ರಾಜಕುಮಾರರನ್ನು ನರಹಂತಕ ವೀರಪ್ಪನ್ ಅಪಹರಿಸಿದ್ದನು ಅದನ್ನೇ ಕವನಗಳ ವಸ್ತುವನ್ನಾಗಿಸಿಕೊಂಡು ಕವನಗಳನ್ನು ಬರೆದು ಮಾನಪ್ಪ ಉಪನ್ಯಾಸಕರು ನೀಡಿದ ಅವಧಿಯಲ್ಲಿ ವರ್ಗದ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಾಚಿಸಲು ಖುಷಿಯೆನಿಸಿ ದಿನನಿತ್ಯವೂ ಕವನ ಬರೆಯುವ ಹವ್ಯಾಸ ಧೃಡವಾಯಿತು.ಇದುವರೆಗೂ ಅವರು ಐದುನೂರಕ್ಕೂ ಅಧಿಕ ಕವನಗಳನ್ನು ಲೇಖನಗಳನ್ನು ಬರೆದಿದ್ದಾರೆ.ಪದವಿ ಹಂತದಲ್ಲಿ ಇತಿಹಾಸದ ಪ್ರಾಧ್ಯಾಪಕರಾದ ಮೈಸೂರಿನ ನಾಗರಾಜ, ಹಾಗೂ ಕನ್ನಡದ ಪ್ರಾಧ್ಯಾಪಕರಾಗಿರುವ ಕಲ್ಯಾಣರಾವ್ ಪಾಟೀಲ್, ಮತ್ತು ಕನ್ನಡದ ಇನ್ನೋರ್ವ ಪ್ರಾಧ್ಯಾಪಕರಾಗಿದ್ದ ಶಿವಕುಮಾರ ಕಂಪ್ಲಿ ಯವರು ಕವನರಚನೆಗೆ ಪೂರಕವಾದ ಅನಕೂಲಮಾಡಿದರು.ಪದವಿಯ ಹಂತದಲ್ಲಿ ಅಂತರ್ ಕಾಲೇಜು ಕವನಸ್ಪರ್ಧೆಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಅಲ್ಲಮ ಕಾವ್ಯಸ್ಪರ್ಧೆಯನ್ನು ಏರ್ಪಡಿಸಿತ್ತು . ಅದರಲ್ಲಿ ಇವರು ಆಯ್ಕೆಯಾಗಿ ಅಲ್ಲಮಕಾವ್ಯಪ್ರಶಸ್ತಿ ಲಭಿಸಿದೆ.
ರಾಷ್ಟ್ರಕವಿ ಕುವೆಂಪುರವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ಅಮೃತಹಸ್ತದಿಂದ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಅತಿಥಿ ಉಪನ್ಯಾಸಕರಾಗಿ ಕಳೆದ 13 ವರ್ಷಗಳಿಂದ ನಿರಂತರ ಸೇವೆಯಲ್ಲಿದ್ದಾರೆ.ಜೊತೆ ಜೊತೆಗೆ ಕವನರಚನೆಯಲ್ಲೂ ತಮ್ಮನ್ನುತಾವು ತೊಡಗಿಸಿಕೊಂಡಿದ್ದಾರೆ. 2016 ನೇ ಇಸವಿಯಲ್ಲಿ ತಮ್ಮ ಚೊಚ್ಚಲ ಕವನಸಂಕಲನವಾದ” ನಿನ್ನೊಳಗೆ ನೀನಿಲ್ಲ” ಎಂಬ ಸ್ವರಚಿತಕವನಸಂಕಲನದ ಬಿಡುಗಡೆಮಾಡಿದರು.ಅದಕ್ಕೆ 2017 ರಲ್ಲಿ ಕನ್ನಡಸಾಹಿತ್ಯಪರಿಷತ್ ಬೆಂಗಳೂರು ಕೊಡಮಾಡಲ್ಪಡುವ ನಾ,ಕು,ಗಣೇಶ ದತ್ತಿ ಪ್ರಶಸ್ತಿ ಲಭಿಸಿತು.2018 ರಲ್ಲಿ ಹೈದ್ರಾಬಾದ್ ಕರ್ನಾಟಕದ ಐದು ಜಿಲ್ಲೆಗಳ ಜಿಲ್ಲಾಗ್ರಂಥಾಲಯಕ್ಕೆ ಇವರ 1,200. ಕವನಸಂಕಲನದ ಪ್ರತಿಗಳು ಆಯ್ಕೆಯಾಗಿವೆ. 2018 ನೇ ಸಾಲಿನಲ್ಲಿ ಪತ್ರಕರ್ತರ ವೇಧಿಕೆ ಬೆಂಗಳೂರು ಕೊಡಮಾಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.ಕರ್ನಾಟಕ ಯುವಜಾಗೃತಿವೇಧಿಕೆ 2017 ರಲ್ಲಿ “ಕಾಯಕರತ್ನ ಪ್ರಶಸ್ತಿ”, 2018 ರಲ್ಲಿ ಬಳಗಾನೂರಿನ ವಿರಕ್ತಮಠದ ಬಂಧುಶತಪುರ ಉತ್ಸವದಲ್ಲಿ “ಸಾಹಿತ್ಯಸಿರಿ” ಪ್ರಶಸ್ತಿಯನ್ನು ಪ್ರಧಾನಮಾಡಲಾಗಿದೆ.ದೇವದುರ್ಗದ ಸಾಹಿತ್ಯಸಮ್ಮೇಳನದ ಸ್ಮರಣಸಂಚಿಕೆ “ಸಿರಿದುರ್ಗ”ದಲ್ಲಿ ಕವನದ ಆಯ್ಕೆ, “ಕಾವ್ಯಮಹಾಂತ,” “ಪ್ರಣತಿ,”ಗಚ್ಚಿನಶ್ರೀ”ಬಿಸಿಲೂರಸಾಧಕರು,ಮುಂತಾದ ರಾಜ್ಯಮಟ್ಟದ ಪ್ರಾತಿನಿಧಿಕ ಕವನಸಂಕಲನಗಳಲ್ಲಿ ಕವನಗಳ ಆಯ್ಕೆಯಾಗಿವೆ.ಹಲವಾರು ಜಿಲ್ಲಾ ತಾಲೂಕಾ ಸಾಹಿತ್ಯಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವನಗಳ ವಾಚನಮಾಡಿದ್ದಾರೆ.ನಾಡಿನ ಪ್ರಮುಖ ಪತ್ರಿಕೆ, ಆಕಾಶವಾಣಿಗಳಲ್ಲಿ ಲೇಖನ,ಕವನಗಳ ಪ್ರಸಾರವಾಗಿವೆ.ಇನ್ನೂ ಕೆಲವು ಕವನಸಂಕಲನಗಳು ಅಚ್ಚಿಗೆ ಸಿದ್ದವಾಗಿವೆ.ಸಾವಿರಾರು ವಿದ್ಯಾರ್ಥಿಗಳಿಗೆ ಉಪನ್ಯಾಸನೀಡಿ ಉತ್ತಮ ವಿದ್ಯಾರ್ಥಿಗಳ ಸೃಷ್ಠಿಯಲ್ಲಿ ಬದುಕನ್ನು ಸವೆಸುತ್ತಿದ್ದಾರೆ.ಇವರ ಈ ಸಾಧನೆಯನ್ನು ಗುರುತಿಸಿ ಪತ್ರಿಕೋದ್ಯಮರತ್ನ ರಾಜ್ಯ ಪ್ರಶಸ್ತಿ ನೀಡಿದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಶ್ರೀ ಎಮ್,ಟಿಪ್ಪುವರ್ಧನ್, ಹಾಗೂ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸಕಲ ಸದಸ್ಯರುಗಳಿಗೆ ಪ್ರಶಸ್ತಿಗೆ ಭಾಜನರಾಗಿರುವ ಸುರೇಶ ಬಳಗಾನೂರು ರವರು ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
Be the first to comment