ರಾಜ್ಯ ಸುದ್ದಿಗಳು
ಬೆಂಗಳೂರು
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಇದೀಗ ವಿವಾದವಾಗಿದ್ದು, ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಅಮಾಧಾನ ಹೊರ ಹಾಕಿದೆ ಎಂದು ವರದಿಯಾಗಿದೆ.ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಸಂಸ್ಕೃತ ಭಾರತಿ ಕರ್ನಾಟಕ ಎಂಬ ಟ್ರಸ್ಟ್ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿತ್ತು. ಈ ಅರ್ಜಿ ಸಂಬಂಧ ಸರ್ಕಾರವನ್ನು ತರಾಟೆಗೆತ್ತಿಕೊಂಡಿರುವ ಹೈಕೋರ್ಟ್ ವಿಭಾಗೀಯ ಪೀಠ , ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ. ಇದರಿಂದ ಎಷ್ಟು ವಿದ್ಯಾರ್ಥಿಗಳು ಹೊರಹೋಗಿದ್ದಾರೆ ಗೊತ್ತೇ? ಎಂದು ಪ್ರಶ್ನಿಸಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯಕ್ಕೆ ಅವಕಾಶವಿದೆಯೇ. ಹೊರರಾಜ್ಯದವರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ? ಉನ್ನತ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಅವಕಾಶವಿದೆಯೇ ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ ಎಂದು ತಿಳಿದು ಬಂದಿದೆ.ಈ ವೇಳೆ ಕನ್ನಡ ಭಾಷೆ ಕಲಿಕೆ ಪ್ರೋತ್ಸಾಹಿಸಲು ಅವಕಾಶವಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಪರ ವಕೀಲ ವಾದ ಮಂಡಿಸಿದ್ದಾರೆ. ಈ ಬಗ್ಗೆ ಸರ್ಕಾರದ ವಾದ ಮಂಡನೆಗೆ ಕಾಲಾವಕಾಶ ಕೋರಿ ವಿಚಾರಣೆಯನ್ನು ನವೆಂಬರ್ 15ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ ಎಂದು ವರದಿಯಾಗಿದೆ.
ಹಲವು ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕನ್ನಡ ಕಲಿತಿರುವುದಿಲ್ಲ. ಆದರೆ ಪದವಿ ಸೇರಿದ ಕೂಡಲೇ ಕನ್ನಡ ಕಲಿಯಬೇಕೆಂದು ಕಡ್ಡಾಯಗೊಳಿಸುವುದು ಸರಿಯಲ್ಲ. ನಮ್ಮ ರಾಜ್ಯವಲ್ಲದೇ, ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರದ ಕ್ರಮದಿಂದ ಈ ಎಲ್ಲಾ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಆಯ್ಕೆ ಆಧರಿತ ಶಿಕ್ಷಣ ಕ್ಕೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಕನ್ನಡ ಕಲಿಕೆ ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿಲ್ಲ. ಹೀಗಿರುವಾಗ ಸರ್ಕಾರದ ಆದೇಶ ಏಕಪಕ್ಷೀಯವಾಗಿದೆ. ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಹಾಗೂ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಆದೇಶ ರದ್ದುಪಡಿಸಬೇಕೆಂದು ಅರ್ಜಿದಾರರು ವಾದಿಸಿದ್ದಾರೆ.
Be the first to comment