ಸುಜ್ಞಾನ ಸಂಗಮ ನನ್ನ ಆತ್ಮ ,ಅದನ್ನೆಂದಿಗೂ ನಿಲ್ಲಿಸುವುದಿಲ್ಲ :ಬಸವಪ್ರಸಾದ ಶರಣರು

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ತಾಲೂಕಿನ ಇರಕಲ್ ಮಠದಲ್ಲಿ ಸುಜ್ಞಾನ ಸಂಗಮ ನನ್ನ ಆತ್ಮ ,ಅದನ್ನು ಭಕ್ತರ ಸಹಕಾರದಿಂದ ಅನವರತ ನಡೆಸಿಕೊಂಡು ಹೋಗುತ್ತೇವೆ. ಐದನೆ ಸುಜ್ಞಾನ ಸಂಗಮಕ್ಕೆ ಹಲವು ತೊಡಕುಗಳು, ಹಿಂಜರಿಕೆಗಳು ಬಂದವು ಅದನ್ನೆಲ್ಲಾ ಬದಿಸರಿಸಿ ದೃಡಸಂಕಲ್ಪದಿ ಮುನ್ನಡೆಸಿಕೊಂಡು ಬಂದು ಈಗ 165 ನೇ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ನಡೆಸಲಾಯಿತು.ಒಳ್ಳೆಯ ಕೆಲಸಗಳಿಗೆ ಆರಂಭದಲ್ಲಿ ವಿಘ್ನ ಬಂದರೂ ಹಿಂಜರಿಯದೇ ಸಾಗಿದರೆ ಯಶಸ್ಸು ಖಂಡಿತ ಎಂದು ಇರಕಲ್ಲಿನ ಶಿವಶಕ್ತಿ ಪೀಠದ ಜಗದ್ಗುರು ಶ್ರೀ ಬಸವಪ್ರಸಾದ ಶರಣರು ಹೇಳಿದರು.ಗುರುವಾರ ಮಧ್ಯಾಹ್ನ ಶ್ರೀಮಠದಲ್ಲಿ ನಡೆದ 165 ನೇ ಸುಜ್ಞಾನ ಸಂಗಮ ಆಧ್ಯಾತ್ಮಿಕ ಚಿಂತನಾಗೋಷ್ಠಿ ಹಾಗೂ ಜ್ಞಾನಾಕ್ಷಿ ಶಾಲೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ 66 ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

CHETAN KENDULI

ನಂತರ ವಿಶೆಷ ಉಪನ್ಯಾಸಕರಾಗಿ ಆಗಮಿಸಿದ್ದ ಉಪನ್ಯಾಸಕ ಸುರೇಶ ಬಳಗಾನೂರು ಮಾತೃ ಭಾಷೆಯ ಮಹತ್ವ ಎನ್ನುವ ವಿಷಯವಾಗಿ ಚಿಂತನೆಯ ರಸಪಾಕವನ್ನು ಉಣಬಡಿಸಿದರು.ಕನ್ನಡ ಮಗುವಿಗೆ ತಾಯಿಯ ಎದೆಹಾಲು ಇದ್ದಂತೆ ಅದನ್ನು ಬಿಟ್ಟರೆ ಆ ಮಗು ಬದುಕುಳಿಯಲು ಸಾಧ್ಯವಿಲ್ಲ.ಕಲಿಯಲು ಸಾವಿರಭಾಷೆಗಳಿರಬಹುದು ಆದರೆ ಮಾತನಾಡಲು ಒಂದೇಭಾಷೆ ಅದು ಕನ್ನಡ.ಕನ್ನಡಭಾಷೆ ತನ್ನದೇಯಾದ ಪರಂಪರೆಯನ್ನು ಹೊಂದಿದೆ. ಅದಕ್ಕೆ 2000, ವರ್ಷಗಳ ಇತಿಹಾಸವಿದೆ, ಪ್ರಪಂಚದ ಕೆಲವೇ ಕೆಲವು ಶಾಸ್ತ್ರೀಯ ಸ್ಥಾನ ಪಡೆದ ಭಾಷೆಗಳಲ್ಲಿ ಕನ್ನಡವೂ ಒಂದು ಜೊತೆಗೆ ಎಂಟು ಜ್ಞಾನಪೀಠಪ್ರಶಸ್ತಿಗಳನ್ನು ಪಡೆದ ಏಕೈಕಭಾಷೆ ಕನ್ನಡ.

ಅದಕ್ಕೆಂದೆ ಕರ್ನಾಟಕವನ್ನು “ಒಂದು ರಾಜ್ಯ ಹಲವು ಜಗತ್ತು” ಎಂದು ಬಣ್ಣಿಸಿರುವದು.ಇದು ನಮ್ಮ ಮಾತೃಭಾಷೆಗಿರುವ ಮಹತ್ವ ವೆಂದು ಅವರು ಕನ್ನಡಭಾಷೆಯ ಮಹತ್ವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಮುಖ್ಯ ಅತಿಥಿ ಮಸ್ಕಿಯ ಜೋಗಿನರಾಮಣ್ಣ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿದ್ದಾರೆಡ್ಡಿ ಗಿಣಿವಾರ ಕನ್ನಡ ಹೃದಯದ ಭಾಷೆ ಅದರಿಂದ ತಿಳಿಯದ ಅತೀ ಕಠಿಣ ವಿಷಯಗಳೂಕೂಡ ಸರಾಗವಾಗಿ ಅರ್ಥೈಸಲು ಸಾಧ್ಯ.ಕನ್ನಡವೆಂಬ ಕನ್ನಡಕದಿಂದ ಪ್ರಪಂಚವನ್ನೇ ನೋಡಬಹುದು. ಕನ್ನಡ ಮನೆಯ ದ್ವಾರ ಬಾಗಿಲು, ಇತರೆ ಭಾಷೆಗಳು ಕಿಟಕಿಗಳಂತೆ ಬೇಕಾದಾಗ ತೆರೆದು ಬೇಡವಾದಾಗ ಮುಚ್ಚಬಹುದು ಎಂದು ಮಾರ್ಮಿಕವಾಗಿ ನುಡಿದರು.ಸಮಾಜ ಸೇವಕ ರಾಮಣ್ಣ ಹಂಪರಗುಂದಿ ಮಾತನಾಡಿ ಮಾತುಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಿದರೆ ಸಕಲವೂ ಸಾಧ್ಯ . ಪ್ರಯತ್ನಕ್ಕೆ ನಿಲುಕದ್ದು ಯಾವುದೂ ಇಲ್ಲ. ಶ್ರೀಗಳ ಈ ತ್ರಿವಳಿ ದಾಸೋಕಬಕಸರ್ಯ ನಿಜಕ್ಕೂ ಶ್ಲಾಘನೀಯ, ಅವರ ಕೆಲಸ ನಮಗೆಲ್ಲ ಆದರ್ಶವೆಂದರು.ಅವಳ ಹೆಜ್ಜೆ ಸಂಸ್ಥೆಯ ಜಿಲ್ಲಾ ಸಂಯೋಜಕರಾಗಿರುವ ಗಿರಿಜಾ ಅಕ್ಕಿ ಮಾತನಾಡಿ, ನಮ್ಮ ಕನ್ನಡಭಾಷೆ ಪ್ರತಿ ಐವತ್ತು ಮೈಲಿಗೆ ಬದಲಾಗುತ್ತದೆ, ಅದರೊಂದಿಗೆ ಉಡುಗೆ,ತೊಡುಗೆ,ಸಂಪ್ರದಾಯ, ಇಂತಹ ಶ್ರೀಮಂತ ಭಾಷೆ ಶ್ರೀಮಂತ ಸಂಸ್ಕೃತಿ ನಮ್ಮದು. ಕನ್ನಡಿಗರು ನಾವು ಎಂಬುದೇ ಹೆಮ್ಮೆಯ ವಿಷಯ. ಅದರ ಬಳಕೆ, ಉಳಿಕೆ, ಮುಂದಿನ ಪೀಳಿಗೆಗಳಿಗೆ ಬಳುವಳಿ ನೀಡುವ ಜವಬ್ದಾರಿ ನಮ್ಮ ಮೇಲಿದೆ.

ಅಂತಹ ಮಹತ್ತರ ಕಾರ್ಯಕ್ಕೆ ಶ್ರೀಗಳು ಕಳೆದ ಹದಿನೈದು ವರ್ಷಗಳಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿರುವದು ನೈಜ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದು ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು.ಮಾನ್ವಿ ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಚಂದ್ರಶೇಖರ ಹೊಗಾರಕೂಡ ಮಾತಮಾಡಿದರು.ಜ್ಞಾನಾಕ್ಷಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಗಾಯನಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ನಂತರ ಅತಿಥಿಗಳಿಗೆ ಗೌರವ ಸನ್ಮಾನ ನೆರವೇರಿತು.ಈ 165ನೇ “ಸುಜ್ಞಾನ ಸಂಗಮ” ಆಧ್ಯಾತ್ಮಿಕ ಚಿಂತನಾಗೋಷ್ಠಿ ಕಾರ್ಯಕ್ರಮದಸಾನಿಧ್ಯವನ್ನು ಶ್ರೀ ಶಿಶಕ್ತಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಬಸವಪ್ರಸಾದ ಮಹಾಸ್ವಾಮಿಗಳು, ವಹಿಸಿದ್ದರೆನೇತೃತ್ವ ವನ್ನು ಶಿವಶಕ್ತಿ ಪೀಠದ ಮಾತೋಶ್ರೀ ಶಾರದಾದೇವಿಯವರು ವಹಿಸಿದ್ದರು.ಈ ಕಾರ್ಯಕ್ರಮದ ದಾಸೋಹ ಸೇವೆಯನ್ನು ಮಸ್ಕಿ ಎಸ್,ಬಿ,ಐ, ಬ್ಯಾಂಕಿನ ವ್ಯವಸ್ಥಾಪಕರಾದ ಸುಧಾ ಮಂಜುನಾಥ ನೇರವೇರಿಸಿದರು.ಸಂಗೀತ ಸೇವೆಯನ್ನು ವೀರೇಶ್ವರ ಪುಣ್ಯಾಶ್ರಮದ ಮಂಜುನಾಥ ಹಿರೇಮಠ ನಗನೂರುರವರು ತಬಲಾ ಸೇವೆಯನ್ನು ರಾಯಚೂರಿನ ಎ.ಎಸ್ ರಘು ಮಾಡಿದರು.ಪ್ರಾಸ್ತಾವಿಕ ನುಡಿಗಳನ್ನು ಶ್ರೀಮಠದ ವಿದ್ಯಾರ್ಥಿ ಅಣ್ಣಪ್ಪ ಮಾಡಿದರೆ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಹನುಮಂತ ತೋರಣದಿನ್ನಿ ಮಾಡಿದರು.ಈ ಕಾರ್ಯಕ್ರಮದಲ್ಲಿ ಇರಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ವಿದ್ಯಾರ್ಥಿಗಳು ,ಪಾಲಕರು, ಶಿಕ್ಷಕ,ಶಿಕ್ಷಕಿಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*