ರಾಜ್ಯ ಸುದ್ದಿಗಳು
ಕಾರವಾರ
ಭದ್ರತೆಯ ದೃಷ್ಟಿಯಿಂದ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಕರಾವಳಿಯ ಸಹ ಒಂದಾಗಿದೆ. ಇದರ ನಿಟ್ಟಿನಲ್ಲಿ ಕಡಲ ತೀರಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳಲು ಕರಾವಳಿ ಕಾವಲು ಪಡೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಸುಮಾರು 320 ಕಿಲೋಮೀಟರ್ ತೀರವನ್ನು ಕಾಯುವ ಜವಾಬ್ದಾರಿ ಇವರ ಮೇಲಿದೆ ಆದರೆ ದುರದೃಷ್ಟವಶಾತ್ ಎನ್ನುವಂತೆ ದೇಶದ ಪ್ರತಿಷ್ಠಿತ ನೌಕಾನೆಲೆ ಯೋಜನೆಯಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕರಾವಳಿ ಕಾವಲು ಪಡೆಯೇ ಸಮಸ್ಯೆಯ ಆಗರವಾಗಿರುವುದ್ದು ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರೇ ಸೂಚಿಸುವಂತೆ ಕಡಲತೀರದಲ್ಲಿ ಸುರಕ್ಷತೆ ಕಾಯುವುದು ಇವರ ಜವಾಬ್ದಾರಿಯಾಗಿದ್ದು, ಸಮುದ್ರ ಮಾರ್ಗವಾಗಿ ಯಾರಾದರೂ ಒಳನುಸುಳಲು ಯತ್ನಿಸಿದಲ್ಲಿ, ಸಮುದ್ರ ದ್ವೀಪದಲ್ಲಿ ಯಾರಾದರೂ ಅಕ್ರಮವಾಗಿ ಆಶ್ರಯ ಪಡೆದಲ್ಲಿ ಅಂತವರ ಮೇಲೆ ಹದ್ದಿನ ಕಣ್ಣಿರಿಸಿ ಭದ್ರತೆ ಕಾಯಬೇಕಾದುದು ಇವರ ಕರ್ತವ್ಯವಾಗಿದೆ.
ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆಯಂತಹ ಯೋಜನೆ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಹೆಸರಿಗೆ ಮಾತ್ರ ಕರಾವಳಿ ಕಾವಲು ಪಡೆ ಉಳಿದುಕೊಂಡಿರುವುದು, ಕಾವಲು ಕಾಯುವ ಕೆಲಸ ಆಗದಿರುವುದು ಬೇಸರದ ಸಂಗತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗಡಿಯಿಂದ ಹಿಡಿದು ಭಟ್ಕಳದವರೆಗೆ ಸುಮಾರು 150 ಕಿಲೋ ಮೀಟರ್ ಕಡಲ ತೀರವಿದ್ದು, ಹಲವು ದ್ವೀಪಗಳನ್ನೂ ಕೂಡ ಒಳಗೊಂಡಿದೆ. ಇದಲ್ಲದೆ ಸಾವಿರಾರು ಮೀನುಗಾರಿಕಾ ಬೋಟ್ ಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುವುದರಿಂದ, ಸಮುದ್ರ ಮಾರ್ಗವಾಗಿ ಯಾರು ಒಳಗೆ ಬಂದರೂ, ಸಮುದ್ರ ಮಾರ್ಗವಾಗಿ ಯಾರು ತೆರಳಿದರು, ಎಂದು ನಿಗಾವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿರುವ ಕರಾವಳಿ ಕಾವಲು ಪಡೆ ಮಾತ್ರ ನಿಷ್ಕ್ರೀಯವಾಗಿದ್ದು, ಹಲವು ಬೋಟ್ಗಳು ಕಾರ್ಯ ನಿರ್ವಹಿಸದೇ ದಡದಲ್ಲೇ ನಿಂತಿದೆ. ಅಲ್ಲದೆ ಮೀನುಗಾರಿಕೆಗೆ ತೆರಳಿದ ಮೀನುಗಾರಿಕಾ ಬೋಟ್ ಗಳು ಅವಗಡಕ್ಕೆ ತುತ್ತಾದಲ್ಲಿ ಅವರನ್ನು ರಕ್ಷಿಸಿ, ಬೋಟ್ ಗಳನ್ನು ದಡಕ್ಕೆ ತರಬೇಕಾದ ಜವಾಬ್ದಾರಿ ಕರಾವಳಿ ಕಾವಲು ಪಡೆಯದಾಗಿದೆ. ಆದರೆ ಜಿಲ್ಲೆಯಲ್ಲಿ ಸಂಭವಿಸಿದ ಅನೇಕ ಅವಗಡಗಳು ಸಂಭವಿಸಿದಲ್ಲಿ ಮೀನುಗಾರರೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುತ್ತಿರುವುದು ಕರಾವಳಿ ಕಾವಲು ಪಡೆಯ ವೈಪಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಾಜ್ಯದ ಕರಾವಳಿಯಲ್ಲಿರುವ ಕರಾವಳಿ ಕಾವಲು ಪಡೆಯ 9 ಠಾಣೆಗಳ ಪೈಕಿ 4 ಠಾಣೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಅದರಲ್ಲೂ ಸಿಬ್ಬಂದಿಗಳ ಕೊರತೆಯಿಂದ ಕರಾವಳಿ ಕಾವಲು ಪಡೆ ಸಮರ್ಪಕ ಕಾರ್ಯನಿರ್ವಹಿಸಲು ಆಗದಿರುವುದು ಇನ್ನೂ ಬಹುತೇಕ ಸಂದರ್ಭದಲ್ಲಿ ಬೋಟ್ಗಳು ಇದ್ದರೆ ಸಿಬ್ಬಂದಿಗಳ ಕೊರತೆ, ಸಿಬ್ಬಂದಿಗಳು ಇದ್ದರೆ ಬೋಟ್ಗಳ ಕೊರತೆ ಉಂಟಾಗಿದೆ. ಕರಾವಳಿಯ ಭದ್ರತೆಯ ಮೇಲೆ ಹದ್ದಿನ ಕಣ್ಣಿಡಬೇಕಾದ ಕರಾವಳಿ ಕಾವಲು ಪಡೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕರಾವಳಿ ಕಾವಲು ಪಡೆಯ ಸಮಸ್ಯೆಯನ್ನು ಬಗೆಹರಿಸಿ, ಸೂಕ್ತ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕಾಗಿದೆ.
Be the first to comment