ಜಿಲ್ಲಾ ಸುದ್ದಿಗಳು
ಶಿವಮೊಗ್ಗ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಾಹಿರಾ ಬಾನು ಎಂಬ ಮಹಿಳೆಯೋರ್ವಳನ್ನು ರೌಡಿಶೀಟರ್ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಲೆನಾಡಿನಲ್ಲಿ ಹೆಬ್ಬೆಟ್ ಮಂಜನ ಹೆಸರು ಚಾಲ್ತಿಯಲ್ಲಿದ್ದು, ಆತನ ಸಹಚರರು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಹೆಬ್ಬೆಟ್ ಮಂಜನ ಗ್ಯಾಂಗ್ ಮಲೆನಾಡಿನಲ್ಲಿ ಅಕ್ರಮ ಮರಳು ದಂಧೆ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಇದೇ ರೌಡಿಶೀಟರ್ ಹೆಬ್ಬೆಟ್ ಮಂಜನ ಹೆಸರನ್ನು ಬಳಸಿ ಬಂಧಿತ ಮಹಿಳೆಯ ಪತಿ ಸದ್ದಾಂ ಹುಸೇನ್ (ಶಂಕಿತ ಉಗ್ರ) ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದ, ಈತ ಜೈಲಿನಿಂದಲೇ ಶಿವಮೊಗ್ಗದ ಉದ್ಯಮಿಗೆ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಎನ್ನಲಾಗಿದೆ.ಬೆದರಿಕೆ ಕರೆ ಬಂದ ವೇಳೆ ಉದ್ಯಮಿ ಒಮ್ಮೆ 50 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಬಳಿಕ ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ಸಿಕ್ಕ ಕೂಡಲೇ ಶಿವಮೊಗ್ಗ ಸೈಬರ್ ಠಾಣೆಯ ಸಿಪಿಐ ಗುರುರಾಜ್ ತಮ್ಮ ತಂಡದ ಜೊತೆ ಭಟ್ಕಳಗೆ ಹೋಗಿ ತನಿಖೆ ನಡೆಸಿದರು. ಖಾತೆಯ ಜಾಡು ಹಿಡಿದು ತನಿಖೆ ಕೈಗೊಂಡಾಗ ಭಟ್ಕಳದ ಸಾಹಿರಾ ಬಾನು ಅವರದ್ದು ಎಂಬುದು ಗೊತ್ತಾಗಿದೆ. ಅಲ್ಲದೇ ಖಾತೆಗೆ ಹಣ ವರ್ಗಾವನೆಯಾಗಿರುವುದು ಕೂಡ ತನಿಖೆಯ ವೇಳೆ ತಿಳಿದುಬಂದಿದೆ.
ಬಂಧಿತ ಮಹಿಳೆಯ ಪತಿ ಸದ್ದಾಂ ಹುಸೇನ್ ಬೆಂಗಳೂರಿನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಪರಪ್ಪನ ಅಗ್ರಹಾರದಲ್ಲಿರುವ ಸದ್ದಾಂ ಹುಸೇನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಸ್ಪೋಟಕ್ಕೆ ಬೇಕಾಗಿರುವ ಜೆಲೆಟಿನ್ ಕಡ್ಡಿಯನ್ನು ಈತನೇ ಪೂರೈಕೆ ಮಾಡಿದ್ದು, ಭಟ್ಕಳದಲ್ಲಿ ಸದ್ದಾಂ ಮೇಲೆ ವಿವಿಧ ಕೇಸುಗಳು ಕೂಡಾ ದಾಖಲು ಆಗಿವೆ.
Be the first to comment