ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಮಂಜುನಾಥ ಸ್ವಾಮಿಗೆ ಲೋಕಾಯುಕ್ತ ನ್ಯಾಯಲಯಾದಿಂದ ಐದು ವರ್ಷ ಶಿಕ್ಷೆ 25ಲಕ್ಷ ದಂಡ ಪಾವತಿಸುವಂತೆ ತೀರ್ಪು.

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾ ವಿಭಾಗ ಎನ್ನುವುದಿದೆ. ಭ್ರಷ್ಟಾಚಾರಕ್ಕೆ ಪರ್ಯಾಯ ಪದ ಎನ್ನುವುದೇನಾದರೂ ಇದ್ದರೆ ಅದು ನಗರ ಯೋಜನಾ ವಿಭಾಗ. ಅಲ್ಲಿ ಸತ್ಯ ಹರಿಶ್ಚಂದ್ರನ ಮೊಮ್ಮೊಕ್ಕಳು ಏನಾದರೂ ಇದ್ದರೆ ಅದು ಈ ಶತಮಾನದ ಪವಾಡ ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದು. ಅಲ್ಲಿ ಕೆಲಸದಲ್ಲಿದ್ದ ಸಹಾಯಕ ನಗರ ಯೋಜನಾಧಿಕಾರಿ ಮಂಜುನಾಥ ಸ್ವಾಮಿಯನ್ನು ಲೋಕಾಯುಕ್ತ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಐದು ವರ್ಷ ಜೈಲು ಶಿಕ್ಷೆ ಮತ್ತು 35 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರು ಮಾಡಿರುವ ಆರ್ಥಿಕ ಅಪರಾಧಕ್ಕೆ ಇದು ಸರಿಯಾದ ಶಿಕ್ಷೆ ಕೂಡ ಮತ್ತು ನಗರ ಯೋಜನಾ ವಿಭಾಗ ಒಂದಿಷ್ಟು ಶುದ್ಧಿಗೊಳ್ಳಲು ಒಂದು ಮೆಟ್ಟಿಲು ಅಷ್ಟೇ. ಯಾಕೆಂದರೆ ಮಂಜುನಾಥ ಸ್ವಾಮಿಗೆ ಶಿಕ್ಷೆ ಘೋಷಣೆ ಆದ ಕೂಡಲೇ ಎಲ್ಲ ಅಧಿಕಾರಿಗಳು ಭಯಭೀತರಾಗಿ ನಾಳೆಯಿಂದ ಲಂಚಕ್ಕೆ ಕೈ ಚಾಚುವುದಿಲ್ಲ ಎಂದು ಶಪಥ ಮಾಡುವುದಿಲ್ಲ. ಪ್ರತಿಯೊಬ್ಬ ಅಧಿಕಾರಿ ಕೂಡ ತಾನು ಸಿಕ್ಕಿಬೀಳುವುದಿಲ್ಲ ಎಂದು ಅಂದುಕೊಂಡೇ ಆರಂಭದಲ್ಲಿ ಐದು ಸಾವಿರಕ್ಕೆ ಕೈ ಒಡ್ಡುತ್ತಾನೆ.ನಂತರ ಅದು ಅರ್ಧ ಲಕ್ಷ ಆಗುತ್ತದೆ. ಬಳಿಕ ಲಕ್ಷ ರೂಪಾಯಿ ದಾಟುತ್ತದೆ. ನಂತರ ಕೆಲವು ಲಕ್ಷಗಳಿಗೆ ಅದು ವಿಸ್ತರಿಸುತ್ತದೆ. ಯಾವತ್ತು ಗ್ರಹಚಾರ ಕೆಟ್ಟಿತೋ ಅಲ್ಲಿಗೆ ಮುಗಿಯಿತು. ಆವತ್ತು ಆ ಅಧಿಕಾರಿ ತಾನು ತೆಗೆದುಕೊಂಡದ್ದು ಮೇಲೆ, ಕೆಳಗೆ ಯಾರಿಗೆ ಕೊಟ್ಟಿದ್ದೇನೆ ಎಂದು ಅಂದುಕೊಂಡಿದ್ದನೋ ಅವರ್ಯಾರು ಇವನ ಸಹಾಯಕ್ಕೆ ಬರುವುದಿಲ್ಲ. ನಂತರ ಹಣ ವಕೀಲರಿಗೆ, ಕೇಸಿಗೆ, ಓಡಾಡಲು ಎಂದು ಖರ್ಚು ಆಗಿ ಒಂದು ದಿನ ಹೀಗೆ ಲೋಕಾಯುಕ್ತ ಕೋರ್ಟ್ “ನಡಿ ಒಳಗೆ” ಎಂದು ಹೇಳುವಷ್ಟರಲ್ಲಿ ಆ ಅಧಿಕಾರಿಯ ಮಾನ ಮರ್ಯಾದೆ ಅವನ ಕುಟುಂಬದವರ ಎದುರಿಗೆ ಬೀದಿಪಾಲಾಗಿ ಬಿಡುತ್ತದೆ. ಅಂತಹ ಅಧಿಕಾರಿಯ ಹೆಂಡತಿಯ ಹೇರಳ ಚಿನ್ನಾಭರಣ ನೋಡಿ ಅಸೂಯೆ ಪಡುತ್ತಿದ್ದ ಸಂಬಂಧಿಕರು ಛೀ, ಥೂ, ಇಂತಹ ಹಣದಿಂದ ಬಂಗಾರ ಮಾಡಿ ಹಾಕಿಸಿಕೊಂಡರೆ ದೇವರು ಒಲಿಯುತ್ತಾನಾ ಎಂದು ಹಿಡಿಶಾಪ ಹಾಕುವಷ್ಟರಲ್ಲಿ ನಿಮ್ಮನ್ನು ಮದುವೆಯಾಗಿ ಇವತ್ತು ಹೀಗೆ ಮರ್ಯಾದೆ ಹೋಗುವಂತಾಯಿತು ಎಂದು ಅಂತಹ ಅಧಿಕಾರಿಯ ಹೆಂಡತಿಯರು ಗೋಳೋ ಎಂದು ಅಳುತ್ತಾರೆ. ಅದರ ಬದಲು ಭಿಕ್ಷೆ ಬೇಡಿದ್ದರೆ ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದು ಇವರಿಬ್ಬರು ಅಂದುಕೊಳ್ಳುವ ಹೊತ್ತಿದೆ ಕಾಲ ಮಿಂಚಿ ಹೋಗಿರುತ್ತದೆ. ಹೀಗೆ ನಗರ ಯೋಜನಾ ವಿಭಾಗದಲ್ಲಿದ್ದ ಮಂಜುನಾಥ ಸ್ವಾಮಿಯ ಮೇಲೆ ಲೋಕಾಯುಕ್ತ ದಾಳಿ ನಡೆದು 14 ವರ್ಷಗಳು ಕಳೆದು ಹೋಗಿವೆ. ರೇಡ್ ಆದ ಬಳಿಕ ಒಂದಿಷ್ಟು ದಿನ ಅಮಾನತಿನಲ್ಲಿದ್ದ ಮಂಜುನಾಥ ನಂತರ ಅಲ್ಲಿಯೇ ಇಂಜಿನಿಯರಿಂಗ್ ವಿಭಾಗಕ್ಕೆ ಸ್ಥಳಾಂತರಗೊಂಡಿದ್ದ. ಯಾಕೆಂದರೆ ಲೋಕಾಯುಕ್ತ ತನಿಖೆ ಆಗುವಾಗ ಆರೋಪಿ ತಾನು ಇದ್ದ ವಿಭಾಗದಲ್ಲಿಯೇ ಇರುವಂತಿಲ್ಲ. ಆದರೆ ಸ್ವಾಮಿಯ ಶಿಫಾರಸ್ಸು ಬಹುಶ: ತುಂಬಾ ಮೇಲಿನ ತನಕ ಇತ್ತು ಎಂದು ಅನಿಸುತ್ತದೆ. ಈ ಮನುಷ್ಯ ಕೆಲವೇ ಸಮಯದಲ್ಲಿ ಮತ್ತೆ ಹಿಂದಿನ ನಗರ ಯೋಜನಾ ವಿಭಾಗಕ್ಕೆ ಮರಳಿ ಸ್ಥಾಪಿತನಾಗಿಬಿಟ್ಟಿದ್ದ. ಅಲ್ಲಿಯೇ ಇದ್ದು ದುಂಡಗಾಗುತ್ತಿದ್ದವನ ಗ್ರಹಚಾರ ಕೊನೆಗೂ ಕೆಟ್ಟಿದೆ. ಈತ ಭ್ರಷ್ಟಾಚಾರಿ ಎಂದು ಲೋಕಾಯುಕ್ತ ಸೀಲ್ ಒತ್ತಿ ಆಗಿದೆ. ಮಂಗಳೂರು ನಗರ ಯೋಜನಾ ವಿಭಾಗದಲ್ಲಿ ಈ ರೀತಿ ಲೋಕಾಯುಕ್ತದಿಂದ ದೋಷಿ ಎಂದು ತೀರ್ಪು ಬಂದು ಶಿಕ್ಷೆ ಘೋಷಣೆಯಾಗಿರುವ ಎರಡನೇ ಕೇಸ್ ಇದು. ಕೆಲವು ತಿಂಗಳುಗಳ ಹಿಂದೆ ಶಿವರಾಜ್ ಎನ್ನುವ ಅಧಿಕಾರಿಗೂ ಹೀಗೆ ಆಗಿತ್ತು. ಈಗ ಮಂಜುನಾಥ ಸ್ವಾಮಿ ಸರದಿ. ಇವರು ಹೆಚ್ಚೆಂದರೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು.

CHETAN KENDULI

ಆದರೆ ಒಮ್ಮೆ ಲೋಕಾಯುಕ್ತ ಕೋರ್ಟಿನಲ್ಲಿ ಆರೋಪ ಸಾಬೀತಾದರೆ ನಂತರ ಯಾವುದಾದರೂ ಬಿಲ್ಡರ್ ಆಫೀಸಿನಲ್ಲಿ ರೈಟರ್ ಕೆಲಸ ಮಾಡಬೇಕಾದಿತು ಬಿಟ್ಟರೆ ಬೇರೆ ಉಪಾಯ ಇಲ್ಲ. ಆದರೆ ಇಂತಹ ಸಹಾಯಕ ನಗರ ಯೋಜನಾ ಅಧಿಕಾರಿಗಳು ಒಂದೇ ಕಡೆ 31 ವರ್ಷಗಳಿಂದ ಗೂಟ ಹೊಡೆದು ಇರುತ್ತಾರಲ್ಲ, ಅದೇ ದೊಡ್ಡ ಆಶ್ಚರ್ಯ. ಹೀಗೆ ದಶಕಗಳ ಕಾಲ ಭ್ರಷ್ಟಾಚಾರದ ಸ್ವರ್ಗ ನಗರ ಯೋಜನಾ ವಿಭಾಗದಲ್ಲಿ ಇರುವವರಿಗೆ ಅದೆಷ್ಟು ಕೋಟಿ ವರಮಾನ ಇಲ್ಲಿಯ ತನಕ ಆಗಿದೆ ಎಂದು ಸಾಮಾನ್ಯ ನಾಗರಿಕರಿಗೆ ಅಂದಾಜು ಕೂಡ ಇರುವುದಿಲ್ಲ. ಇವರು ಮಧ್ಯಮ ವರ್ಗದವರಿಂದಲೂ ಕಿತ್ತು ತಿಂದು ಮಾಡಿರುವ ಆಸ್ತಿಪಾಸ್ತಿ ಇವರ ಎಷ್ಟೋ ತಲೆಮಾರುಗಳಿಗೆ ಸಾಕು. ಇವರಿಗೆ ತಾವು ಸಿಕ್ಕಿ ಬೀಳುವುದಿಲ್ಲ ಎನ್ನುವ ಭಂಡ ಧೈರ್ಯ ಇರುವುದರಿಂದ ಎಷ್ಟು ತಿನ್ನಲು ಆಗುತ್ತದೆಯೋ ಅಷ್ಟು ತಿನ್ನುತ್ತಲೇ ಇರುತ್ತಾರೆ. ಲೋಕಾಯುಕ್ತ ಅಧಿಕಾರಿಗಳು ಇಂತಹ ಹೆಚ್ಚೆಚ್ಚು ಭ್ರಷ್ಟರನ್ನು ಹಿಡಿದರೆ ಅದರಿಂದ ಜನಸಾಮಾನ್ಯರಿಗೂ ಧೈರ್ಯ ಬರುತ್ತದೆ. ಒಟ್ಟಿನಲ್ಲಿ ಮಂಜುನಾಥ ಸ್ವಾಮಿ ದೋಷಿ ಎಂದು ತೀರ್ಪು ಹೊರಬಿದ್ದಿರುವುದು ಉಳಿದ ಅಧಿಕಾರಿಗಳಿಗೂ ಒಂದು ಪಾಠವಾಗಲಿ ಎಂದು ನಮ್ಮ ಆಶಯ. ಇತ್ತೀಚೆಗೆ ಸರಕಾರಿ ಅಧಿಕಾರಿಗಳು ತಾವು ಲಂಚ ಮುಟ್ಟಲ್ಲ ಎಂದು ಲಂಚ ವಿರೋಧಿ ಸಪ್ತಾಹದ ಅಂಗವಾಗಿ ಪ್ರತಿಷ್ಣೆ ಸ್ವೀಕರಿಸಿದ್ದಾರೆ. ಅದು ಆ ವಾರಕ್ಕೆ ಮಾತ್ರ ಸೀಮಿತವಾಗದೇ ಇರಲಿ. ಇನ್ನು ಜನರು ಕೂಡ ಹಿಂದೆ ತಮ್ಮ ಕೆಲಸ ಆದ ಕೂಡಲೇ ಖುಷಿಯಿಂದ ಕೊಡುತ್ತಿದ್ದ ಭಕ್ಷೀಸು ಕಾಲಕ್ರಮೇಣ ಕಡ್ಡಾಯವಾಗಿ ಅಧಿಕಾರಿಗಳು ಸುಲಿಗೆಗೆ ನಿಂತ ಕಾರಣ ಈ ಸಮಸ್ಯೆ ಶುರುವಾಗಿರುವುದು. ಆದ್ದರಿಂದ ಜನರು ಕೂಡ ತಾವು ಕೊಡುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಲಿ. ಅಧಿಕಾರಿಗಳು ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿ. ಒಂದು ವಿಷಯ ನೆನಪಿರಲಿ. ಲಂಚದ ಹಣದಲ್ಲಿ ತೆಗೆದುಕೊಂಡ ಮನೆ ಮತ್ತು ಮಂಚ ನೆಮ್ಮದಿಯ ನಿದ್ರೆ ಕೊಡುತ್ತಾ ಎಂದು ಮೊದಲು ಆ ಅಧಿಕಾರಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ!

Be the first to comment

Leave a Reply

Your email address will not be published.


*