ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ದಿನ್ನೆ ಸೋಲೂರು ಕೆರೆ ಅಭಿವೃದ್ಧಿಗೊಂಡಿದ್ದು, ಇದೀಗ ಗ್ರಾಮದ ಕೆಲವರು ಗೊಬ್ಬರ-ಸೆಗಣಿ ತ್ಯಾಜ್ಯವನ್ನು ಕೆರೆಗೆ ಸುರಿದಿದ್ದು, ಕೆರೆ ನೀರು ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರವು ಕೆರೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಕೆರೆಗಳ ಸಂರಕ್ಷಿಸುವುದು ಗ್ರಾಮೀಣ ಭಾಗದ ಜನರ ಕರ್ತವ್ಯವಾಗಿದೆ. ಗ್ರಾಪಂಯಿಂದ ಜಿಪಂನ ಸುಮಾರು ೪ಲಕ್ಷ ರೂ. ಅನುದಾನದಲ್ಲಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಲೋಕಯುಕ್ತ ಆದೇಶದಂತೆ ಕೆರೆ ಒತ್ತುವರಿ ತೆರವುಗೊಳಿಸಿ, ಕೆರೆಯ ಬೌಂಡ್ರಿಯನ್ನು ಗುರುತು ಮಾಡಲಾಗಿದ್ದು, ಕೆರೆಯನ್ನು ಒತ್ತುವರಿ ಮಾಡಿದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ನಾಮಫಲಕವನ್ನು ಸಹ ಹಾಕಲಾಗಿದ್ದರೂ ಸಹ ಕೆರೆಗಳ ಸಂರಕ್ಷಿಸುವುದು, ಜೀವ ಜಲ ಉಳಿಸುವ ಕೆಲಸವನ್ನು ಕೆಲವರು ಮಾಡದಿರುವುದು ಬೇಸರದ ಸಂಗತಿಯಾಗಿದೆ.
ಕೆರೆಗೆ ಲೋಡ್‌ಗಟ್ಟಲೇ ಸೆಗಣಿ-ಗೊಬ್ಬರವನ್ನು ತಂದು ಸುರಿದಿದ್ದರಿಂದ ಕೆರೆಯ ನೀರು ಹಂತಹಂತವಾಗಿ ಕಲುಷಿತಗೊಳ್ಳುತ್ತಿರುವುದು ಸ್ಥಳೀಯ ಗ್ರಾಮೀಣ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೆರೆಯತ್ತ ಗಮನಹರಿಸಿ, ಸ್ವಚ್ಛತೆಗೆ ಆದ್ಯತೆ ನೀಡುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿಶ್ವನಾಥಪುರ ಗ್ರಾಮದ ರೈತ ರಾಮಮೂರ್ತಿ ಮಾತನಾಡಿ, ಕೆರೆಯ ಪಕ್ಕದಲ್ಲಿಯೇ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸಹ ಇದೆ. ಕೆರೆಯಂಗಳದಲ್ಲಿ ಗೊಬ್ಬರದ ರಾಶಿ ಸುರಿದಿದ್ದರಿಂದ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಕಲುಷಿತ ನೀರು ದನಕರುಗಳು ಕುಡಿದರೆ, ಅನಾರೋಗ್ಯಕ್ಕೆ ತುತ್ತಾಗುತ್ತವೆ. ತ್ಯಾಜ್ಯ ಸುರಿಯುತ್ತಿರುವವರಿಗೆ ಸುರಿಯದಂತೆ ಹೇಳಿದರೆ, ಸರಕಾರದ ಜಾಗದಲ್ಲಿ ಸುರಿದಿರುವುದು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಕೆರೆಯು ಯಾರೊಬ್ಬರ ಸ್ವತ್ತಲ್ಲ, ಅದನ್ನು ಸಂರಕ್ಷಿಸಿದರೆ ಮುಂದಿನ ಪಿಳಿಗೆಗೆ ಅನುಕೂಲವಾಗಲಿದೆ. ಆದಷ್ಟು ಬೇಗನೆ ಅಧಿಕಾರಿಗಳು ಮೌನವಾಗಿರುವದನ್ನು ಬಿಟ್ಟು, ಕೆರೆಗೆ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Be the first to comment