ಸರಕಾರದಿಂದ ನೀಡುವ ಪಡಿತರ ಗುಣಮಟ್ಟವಿಲ್ಲ ಪಡಿತರ ಪಡೆಯುವವರ ಆರೋಪ ರಾಗಿಯಲ್ಲಿ ತ್ಯಾಜ್ಯ | ಗುಣಮಟ್ಟ ಪರಿಶೀಲನೆಯಾಗದೆ ವಿಎಸ್ಸೆಸ್ಸೆನ್‌ಗೆ ವಿಲೇವಾರಿ | ೬೦ಮೂಟೆ ರಾಗಿ ವಾಪಾಸ್

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು

ದೇವನಹಳ್ಳಿ

ಸರಕಾರ ಬಡ ಜನರಿಗೆ ಉಚಿತ ಅಕ್ಕಿ ಮತ್ತು ರಾಗಿಯನ್ನು ನೀಡುತ್ತಿದೆ. ಆದರೆ, ಗುಣಮಟ್ಟವಿಲ್ಲದ ಪಡಿತರವನ್ನು ಪಡಿತರ ಅಂಗಡಿಗಳಲ್ಲಿ ನೀಡುತ್ತಿರುವುದು ಬಹುತೇಕ ಕಡೆಗಳಲ್ಲಿ ಕಂಡುಬಂದಿರುತ್ತದೆ. ಇತರೆ ಜಿಲ್ಲೆಗಳಿಂದ ರಾಗಿ ಮತ್ತು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡು ಜಿಲ್ಲೆಯ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ರಫ್ತು ಮಾಡಲಾಗುತ್ತಿದ್ದು, ದಾಸ್ತಾನು ಬರುವ ರಾಗಿ ಗುಣಮಟ್ಟದಿಂದ ಕೂಡಿರುವುದು ಒಂದು ಕಡೆಯಾದರೆ, ರಾಗಿಯು ಸಂಪೂರ್ಣವಾಗಿ ಪ್ಲಾಸ್ಟಿಕ್, ಮದ್ಯದ ಬಾಟೆಲ್ ಮತ್ತು ಕಸಕಡ್ಡಿಗಳಿಂದ ಕೂಡಿರುವುದು ಪಡಿತರ ಪಡೆಯುವವರಿಗೆ ಮುಜುಗರವನ್ನುಂಟು ಮಾಡುತ್ತಿದೆ. 

CHETAN KENDULI

ಸರಕಾರದಿಂದ ಸಿಗುವ ಸೌಲಭ್ಯ ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೇರದಿರುವುದಕ್ಕೆ ಇದು ನಿದರ್ಶನವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಪಡಿತರ ನೀಡುವ ದಾಸ್ತಾನು ಕೊಠಡಿಯಲ್ಲಿ ರಾಗಿ ಮೂಟೆಗಳು ಬಂದಿದ್ದು, ರಾಗಿ ಮೂಟೆಯಲ್ಲಿ ಕಸಕಡ್ಡಿಗಳು ಸೇರಿದ್ದು, ಅದನ್ನು ಗಮನಿಸಿದ ಸಿಬ್ಬಂದಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ದಾಸ್ತಾನನ್ನು ವಾಪಸ್ ಕಳುಹಿಸುತ್ತಿದ್ದಾರೆ. ಜನರಿಗೆ ಸಕಾಲದಲ್ಲಿ ದಾಸ್ತಾನು ಬಂದರೂ ಗುಣಮಟ್ಟದಿಂದ ಕೂಡಿರದಿರುವುದರಿಂದ ಫಲಾನುಭವಿಗಳು ಪಡಿತರ ಪಡೆಯದೆ ಮನೆಗಳಿಗೆ ವಾಪಾಸ್ ಆಗುವ ಪರಿಸ್ಥಿತಿ ಬಹುತೇಕ ವಿಎಸ್‌ಎಸ್‌ಎನ್‌ಗಳಲ್ಲಿ ನಡೆಯುತ್ತಿದೆ. 

ರೈತರಿಂದ ಪಡೆಯುವ ರಾಗಿಯ ಗುಣಮಟ್ಟವನ್ನು ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುವುದರ ಮೂಲಕ ಎರಡು-ಮೂರು ಬಾರಿ ಪರಿಶೀಲನೆ ನಡೆಸಬೇಕು. ಉಚಿತ ಪಡಿತರ ನೀಡುವ ಅಂಗಡಿಗಳಿಗೆ ಆಗಾಗ್ಗ ಅಧಿಕಾರಿಗಳು ಭೇಟಿ ನೀಡಬೇಕು. ದಾಸ್ತಾನು ಸಂಗ್ರಹಣಾ ಕೊಠಡಿಯಲ್ಲಿ ಯಾವ ರೀತಿ ದಾಸ್ತಾನು ಮಾಡುತ್ತಿದ್ದಾರೆಂಬುವುದರ ಮಾಹಿತಿ ಪಡೆಯಬೇಕು. ಜನರಿಗೆ ನೀಡುವ ಆಹಾರ ಗುಣಮಟ್ಟದಿಂದ ಇದೆಯೋ ಇಲ್ಲವೋ ಎಂಬುವುದನ್ನು ಪರಿಶೀಲಿಸಬೇಕು. ಜತೆಗೆ ಗುಣಮಟ್ಟವಿಲ್ಲದ ದಾಸ್ತಾನು ಕಳುಹಿಸಿಕೊಡುವ ಗೋಡನ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಗ್ರಾಮಸ್ಥರು ಮತ್ತು ಪಡಿತರ ಪಡೆಯುವ ಜನರು ಆಗ್ರಹಿಸಿದ್ದಾರೆ. 

****

ರಾಗಿಯಲ್ಲಿ ಕಸ ಕಡ್ಡಿ ಸೇರಿರುವುದು ಗಮನಿಸಿದ್ದೇವೆ. ಅದನ್ನು ಜನರಿಗೆ ನೀಡುತ್ತಿಲ್ಲ. ಬಂದಿರುವ ರಾಗಿ ದಾಸ್ತಾನು ದಾವಣಗೆರೆಯಿಂದ ಬಂದಿದೆ. ಎಲ್ಲಿಂದ ಬಂದಿದೆಯೋ ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ. ಉಳಿದಂತೆ ಸರಕಾರದ ನಿರ್ದೇಶನದಂತೆ ಬಂದಿರುವ ಪಡಿತರವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. 

– ಹೆಸರು ಹೇಳಲಿಚ್ಚಿಸದ ಸಿಬ್ಬಂದಿ 

****

ರಾಗಿಯು ವಿಎಸ್‌ಎಸ್‌ಎನ್‌ಗೆ ಬಂದು ಸುಮಾರು ೩ ತಿಂಗಳಾಗಿದೆ. ಕೆಲವರು ಇದೇ ರಾಗಿಯನ್ನು ಪಡೆದುಕೊಂಡಿದ್ದಾರೆ. ಆಹಾರವನ್ನು ಜನರು ತಿಂದರೆ ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಸರಕಾರ ಇದನ್ನು ಗಮನಿಸಬೇಕು. ನಮಗೆ ನೀಡುವ ಆಹಾರ ಉಚಿತ ಎಂಬ ಕಾರಣಕ್ಕೆ ಹೇಗೆಂದರೆ ಹಾಗೆ ನೀಡುವುದ ಸರಿಯಲ್ಲ. 

– ರಾಮಮೂರ್ತಿ | ಗ್ರಾಮಸ್ಥ, ವಿಶ್ವನಾಥಪುರ

****

ನಮ್ಮ ತಾಲೂಕಿನಲ್ಲಿ ೧೬ ವಿಎಸ್‌ಎಸ್‌ಎನ್ ಬರಲಿದ್ದು, ಗುಣಮಟ್ಟದ ಆಹಾರ ಪೂರೈಸದಿರುವ ವಿಎಸ್‌ಎಸ್‌ಎನ್‌ಗಳು ನಮ್ಮ ಗಮನಕ್ಕೆ ತಂದರೆ, ಆ ವಿಎಸ್‌ಎಸ್‌ಎನ್‌ಗೆ ದಾಸ್ತಾನು ಕಳುಹಿಸಿಕೊಡುವ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ತಾಲೂಕಿಗೆ ತಿಂಗಳಿಗೆ ೧೨,೬೦೦ಕ್ವಿಂಟಾಲ್‌ನಷ್ಟು ಅಕ್ಕಿ ಮತ್ತು ರಾಗಿ ಒಟ್ಟಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರುತ್ತಿದೆ. ಆಹಾರ ಗುಣಮಟ್ಟ ಪರಿಶೀಲಿಸುವುದು ಅಧಿಕಾರಿಗಳ ಕೆಲಸವಾಗಿರುತ್ತದೆ. ಕೇವಲ ನಾಮಕಾವಸ್ಥೆಗೆ ರಾಗಿ ಒಂದು ಹಿಡಿ ತೋರಿಸುತ್ತಾರಷ್ಟೇ ಅಷ್ಟು ಮಟ್ಟದ ದಾಸ್ತಾನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. – ನಾರಾಯಣಸ್ವಾಮಿ | ಅಧ್ಯಕ್ಷರು, ಟಿಎಪಿಸಿಎಂಎಸ್, ದೇವನಹಳ್ಳಿ

Be the first to comment

Leave a Reply

Your email address will not be published.


*