ರಾಜ್ಯ ಸುದ್ದಿಗಳು
ದೇವನಹಳ್ಳಿ
2023 ರ ಡಿಸೆಂಬರ್ ಅಂತ್ಯದೊಳಗೆ ರಾಮಮಂದಿರ ಉದ್ಘಾಟನೆಯಾಗಲಿದ್ದು, ವಿಶ್ವಕ್ಕೆ ಸಾಂಸ್ಕೃತಿಕ ಕೇಂದ್ರವಾಗಿ ವಿಜೃಂಭಿಸಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ತಾಲ್ಲೂಕಿನ ಸಾದಹಳ್ಳಿ ಗೇಟ್ ನಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಬೆಂಗಳೂರು ಹಾಗೂ ಸಾದಹಳ್ಳಿಯ ಶ್ರೀ ಹನುಮಾನ್ ಗ್ರಾನೈಟ್ ವತಿಯಿಂದ ಹನುಮನ ನಾಡಿನಿಂದ ರಾಮನೆಡೆಗೆ ಸಾದಹಳ್ಳಿ ಬಂಡೆ ಎಂಬ ಕಾರ್ಯಕ್ರಮದಲ್ಲಿ ಗ್ರಾನೈಟ್ ಕಲ್ಲುಗಳನ್ನು ಅಯೋಧ್ಯೆಗೆ ಕಳುಹಿಸಲು ಚಾಲನೆ ನೀಡಿ ಅವರು ಮಾತನಾಡಿದರು.
ರಾಮಮಂದಿರದ ಹೋರಾಟದಲ್ಲಿ ದಶಕಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಶತಮಾನಗಳ ಕಾಲದ ಹೋರಾಟಕ್ಕೆ ನಮಗೆ ಜಯ ಸಿಕ್ಕಿದೆ. ನಮ್ಮೆಲ್ಲರಿಗೂ ಅಪಮಾನ ಮಾಡುತ್ತಿದ್ದ ಕಟ್ಟಡವನ್ನು ಅಲ್ಲಿಂದ ತೆರವುಗೊಳಿಸಿ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಮ್ಮೆಲ್ಲರ ಸಂಕಲ್ಪ ರಾಮಮಂದಿರ ನಿರ್ಮಾಣ ಮಾಡುವುದಾಗಿದೆ. ಬಿಜೆಪಿಯ ಸರ್ಕಾರದ ಅವಧಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎನ್ನುವ ಕೋಟ್ಯಾಂತರ ಮಂದಿ ದೇಶ ಭಕ್ತರ ಕನಸು ನನಸಾಗುತ್ತಿದ್ದು, ನ್ಯಾಯಾಲಯದಲ್ಲಿದ್ದ ಪ್ರಕರಣ, ಅಲ್ಲೆ ಇತ್ಯರ್ಥವಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ, ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡಿದ ಪರಿಣಾಮ ಸುಫ್ರೀಂಕೋರ್ಟ್ ರಾಮನ ಪರವಾಗಿ ನಿಂತಿದೆ.
ದೇಶದ ಜನರು ರಾಮಮಂದಿರದ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ದಾನವಾಗಿ ಕೊಟ್ಟಿದ್ದಾರೆ. ಸಾವಿರಾರು ಕೋಟಿ ಹಣ ಸಂಗ್ರಹವಾಗಿದೆ. ರಾಮಮಂದಿರ ನಿರ್ಮಾಣ ಸಮಿತಿಯಲ್ಲಿ ನಮ್ಮ ರಾಜ್ಯದ ಪೇಜಾವರ ಶ್ರೀಗಳು ಇದ್ದಾರೆ. ಗೋಪಾಲ್ ಜೀ ಅವರು ಸಮಿತಿಯಲ್ಲಿರುವುದು ರಾಜ್ಯಕ್ಕೆ ಸಿಕ್ಕ ಗೌರವ, ದೇವನಹಳ್ಳಿಯ ಸಾದಹಳ್ಳಿಯ ಬಂಡೆ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯವಾಗುತ್ತಿರುವುದು ಈ ಭಾಗದ ಜನತೆಗೆ ಸಿಕ್ಕ ಗೌರವವಾಗಿದ್ದು, 2023 ಕ್ಕೆ ಈ ಕಾರ್ಯ ಸಾಕಾರಗೊಳ್ಳಲಿದೆ ಎಂದರು. ಮುಖಂಡ ನಾ.ತಿಪ್ಪೇಸ್ವಾಮಿ ಮಾತನಾಡಿ, ರಾಮಮಂದಿರದ ನಿರ್ಮಾಣದ ಮೂಲಕ ದೇಶದ ಮೌಲ್ಯಗಳನ್ನು ಪ್ರತಿಷ್ಟೆ ಮಾಡುವಂತಹ ಕಾರ್ಯ ನಡೆಯುತ್ತಿದೆ. ದೇಶಾದ್ಯಂತ ಹೋರಾಟಗಳು, ರಥಯಾತ್ರೆಗಳಾದವು. ನ್ಯಾಯಾಲಯದಲ್ಲಿ ತೀರ್ಪು ಬಂದಾಗ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಬಾರದು ಎನ್ನುವ ಸೂಚನೆಗೆ ಎಲ್ಲರೂ ಸಹಕರಿಸಿದರು. ರಾಮನಲ್ಲಿನ ಸಹನಾಶಕ್ತಿಯನ್ನು ಎತ್ತಿತೋರಿಸಿದರು. ದೇಶದ ಜನರ ಭಾವನೆ, ಸಂಕಲ್ಪ, ರಾಮನ ಬಗ್ಗೆ ಇರುವ ಶ್ರದ್ಧೆ, ಭಕ್ತಿಯನ್ನು ಅಳತೆ ಮಾಡಲಿಕ್ಕೆ ಸಾಧ್ಯವಿಲ್ಲ, ಈ ದೇಶವನ್ನು ಅನುಭವಿಸಿದವರಿಗೆ ಈ ಬದ್ಧತೆಯಿರಲಿಲ್ಲ ಎಂದರು.
ಶಾಸಕ ನಿಸರ್ಗನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಶ್ಲಾಘನೀಯವಾಗಿದೆ. ಅನೇಕ ವರ್ಷಗಳ ಹೋರಾಟದ ಪ್ರತಿಫಲವಾಗಿ ಮಂದಿರ ನಿರ್ಮಾಣವಾಗುತ್ತಿದ್ದು, ನನ್ನ ಕ್ಷೇತ್ರದಿಂದ ಗ್ರಾನೈಟ್ ಕಲ್ಲು ಸರಬರಾಜು ಮಾಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ನನ್ನ ಕ್ಷೇತ್ರದ 56 ಸಾವಿರ ಕುಟುಂಬಗಳಿಗೆ ಇದರ ಪ್ರತಿಫಲ ಸಿಗಲಿ ಎಂದರು.
ಮುಖಂಡ ಗೋಪಾಲ್ ಮಾತನಾಡಿ, ಈ ದೇಶದಲ್ಲಿ ಭಾರತದ ಮನಸ್ಸುಗಳನ್ನು ಕೇಂದ್ರೀಕರಿಸುವ ಮಂದಿರವಾಗಿ ರಾಮಮಂದಿರ ನಿರ್ಮಾಣವಾಗಲಿದೆ. ಪ್ರಸ್ತುತ 20 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಮಂದಿರಕ್ಕೆ ಬರುತ್ತಿದ್ದಾರೆ. ಕೋವಿಡ್ ನಿಯಮಗಳು ಸಂಪೂರ್ಣವಾಗಿ ಸಡಿಲವಾದರೆ, ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಬರುವ ಸಾಧ್ಯತೆಗಳು ಇರುವುದರಿಂದ ಭಕ್ತರಿಗೆ ಅನುಕೂಲ ಕಲ್ಪಿಸುವಂತಹ ಕಾರ್ಯವನ್ನೂ ಮಾಡಲಾಗುತ್ತಿದೆ. ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವಂತಹ ಕಾರ್ಯವನ್ನು ಮಾಡಲಿಕ್ಕೆ ಅಗತ್ಯವಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶವು ಆತ್ಮನಿರ್ಭರವಾಗಬೇಕು. ಮಂದಿರ ನಿರ್ಮಾಣವಾದ ನಂತರ ಗೋಹತ್ಯೆ ನಿಲ್ಲಬೇಕು, ಮತಾಂತರ ನಿಲ್ಲಬೇಕು ಎಂದರು. ಪೇಜಾವರ ಮಠದ ಶ್ರೀಗಳು ಮಾತನಾಡಿದರು. ಮಾಜಿ ಕೇಂದ್ರ ಸಚಿವ ಸದಾನಂದಗೌಡ, ಶಾಸಕ ವಿಶ್ವನಾಥ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕಲ್ಲಡ್ಕಪ್ರಭಾಕರಭಟ್, ಆನಂದ ಗುರೂಜೀ, ಗ್ರಾನೈಟ್ ಕಂಪನಿಯ ಮಾಲೀಕ ಶ್ರೀನಾಥ್, ಹಾಗೂ ಸ್ಥಳೀಯ ಮುಖಂಡರು, ಹಾಜರಿದ್ದರು.
Be the first to comment