ರಾಜ್ಯ ಸುದ್ದಿಗಳು
ದೇವನಹಳ್ಳ
ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಅರದೇನಹಳ್ಳಿ ಗ್ರಾಮದಲ್ಲಿರುವ ೩೦ ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಕನಿಷ್ಟ ಮೂಲಸೌಕರ್ಯವೂ ಇಲ್ಲದೇ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದರೂ ಜಿಲ್ಲಾ ಪಂಚಾಯಿತಿ, ಸ್ಥಳೀಯ ಗ್ರಾಮ ಪಂಚಾಯಿತಿ ಕಂದಾಯ ಇಲಾಖೆಯ, ಸಮಾಜ ಕಲ್ಯಾಣ ಇಲಾಖೆಯವರಾಗಲಿ, ಯಾರೊಬ್ಬರೂ ಕೂಡ ಇಲ್ಲಿನ ವಾಸ್ತಾವಂಶದ ಬಗ್ಗೆ ಗಮನಹರಿಸಿಲ್ಲ.ನರೇಗಾ ಯೋಜನೆಯಡಿ ಕಾಮಗಾರಿ ಮಾಡಲಿಕ್ಕೆ ಅವಕಾಶವಿದ್ದರೂ, ಸಿಸಿ ರಸ್ತೆಯನ್ನು ಹೊರತುಪಡಿಸಿ, ಯಾವುದೇ ಕಾಮಗಾರಿ ಮಾಡಿಲ್ಲ, ಕಾಲೋನಿಯಿಂದ ಹೊರಗೆ ನರೇಗಾ ಯೋಜನೆಯಡಿ ಮಾಡುತ್ತಿರುವ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಕಾರಣ, ಸತತವಾಗಿ ಸುರಿಯುತ್ತಿರುವ ಮಳೆಯ ನೀರೆಲ್ಲವೂ ಮನೆಗಳಿಗೆ ನುಗ್ಗುತ್ತಿರುವುದರಿಂದ ವಾಸಿಗಳು ಪರಿಪಾಟ್ಲೆ ಪಡುವ ಪರಿಸ್ಥಿತಿ ಇದೆ.
ಇಲ್ಲಿರುವ ಬಹುತೇಕ ದಲಿತರ ಮನೆಗಳು, ಹೆಂಚಿನ ಮನೆಗಳಾಗಿವೆ. ಮನೆಗಳ ಮೇಲ್ಛಾವಣಿಯ ಮೇಲೆ ಹಾಸಿರುವ ಹೆಂಚುಗಳು ಒಡೆದುಹೋಗಿದ್ದು, ಮಳೆ ಬಂದರೆ ನೀರೆಲ್ಲವೂ ಮನೆಗಳಲ್ಲಿರುತ್ತವೆ. ಮಳೆಯಿಂದ ರಕ್ಷಣೆ ಪಡೆಯಲಿಕ್ಕಾಗಿ ಪ್ಲಾಸ್ಟಿಕ್ ಪೇಪರ್ ಗಳ ಹೊದಿಕೆಯನ್ನು ಹಾಸಿಕೊಂಡು ಜನರು ಜೀವನ ಮಾಡುತ್ತಿದ್ದಾರೆ. ಒಂದೊಂದು ಮನೆಯಲ್ಲಿ ಮೂರು ಕುಟುಂಬಗಳು ವಾಸವಾಗಿದ್ದಾರೆ. ಹಂದಿಗೂಡುಗಳಂತಿರುವ ಮನೆಗಳಲ್ಲೆ ಇವರ ವಾಸ, ಹಗಲೆಲ್ಲಾ ಕೂಲಿ ಮಾಡಿಕೊಂಡು ಬಂದರೂ ರಾತ್ರಿಯ ವೇಳೆ ನೆಮ್ಮದಿಯಾಗಿ ಮನೆಗಳಲ್ಲಿ ನಿದ್ದೆ ಮಾಡಲಿಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದು ೭೫ ವರ್ಷಗಳಾಗಿದ್ದರೂ ದಲಿತ ಕೇರಿಗಳು ಇಷ್ಟರಮಟ್ಟಿಗೆ ದುಸ್ಥಿತಿಗೆ ತಲುಪಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಶೌಚಾಲಯಗಳಿಲ್ಲ: ಸರ್ಕಾರ, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆಗೂ ಪ್ರತ್ಯೇಕವಾದ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದರೂ ಇಲ್ಲಿರುವ ಒಂದು ಮನೆಗೂ ಶೌಚಾಲಯವಿಲ್ಲ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶೇ ೧೦೦ ರಷ್ಟು ಶೌಚಾಲಯಗಳು ನಿರ್ಮಾಣ ಮಾಡಿ, ಬಯಲು ಬಹಿರ್ದೇಸೆ ಮುಕ್ತ ಗ್ರಾಮವನ್ನಾಗಿ ಮಾಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.ಸ್ನಾನದ ಗೃಹಗಳಿಲ್ಲ: ಇಲ್ಲಿನ ಹೆಣ್ಣು ಮಕ್ಕಳು, ಮಹಿಳೆಯರು, ಸ್ನಾನ ಮಾಡಲಿಕ್ಕೆ ಜಾಗವಿಲ್ಲದೆ, ಕೆಲವರು, ಹಳೇಯ ಶೌಚಾಲಯಗಳಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಪ್ಲಾಸ್ಟಿಕ್ ಪೇಪರ್ ಗಳನ್ನು ಅಡ್ಡಕಟ್ಟಿಕೊಂಡು ಸ್ನಾನ ಮಾಡಬೇಕಾಗಿದೆ. ಕೆಲವರು, ಸೀರೆಗಳನ್ನೆ ಅಡ್ಡಕಟ್ಟಿಕೊಂಡು ಕಾಲೋನಿಯಲ್ಲಿನ ಗಂಡಸೆರೆಲ್ಲರೂ ಕೆಲಸಗಳಿಗೆ ಹೋದ ನಂತರ ಸ್ನಾನ ಮಾಡಲಿಕ್ಕೆ ಹೋಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದುಕೊಂಡು ಮನೆ ನಿರ್ಮಾಣಮಾಡಿಕೊಳ್ಳಲೆಂದು ಪ್ರಯತ್ನ ಪಟ್ಟಿದ್ದರಾದರೂ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ, ನಿರ್ಮಾಣದ ಹಂತದಲ್ಲೆ ಮನೆಯ ಕೆಲಸ ನಿಂತಿದ್ದು, ಒಳಭಾಗದಲ್ಲೆಲ್ಲಾ ಗಿಡಗಳು ಬೆಳೆದು ನಿಂತಿವೆ.ಶವ ಸಂಸ್ಕಾರಕ್ಕೂ ತೊಂದರೆ: ಇಲ್ಲಿನ ದಲಿತರ ಕೇರಿಯಲ್ಲಿ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಸರಿಯಾದ ಸ್ಮಶಾನವಿಲ್ಲ. ಈಗಿರುವ ಸ್ಮಶಾನದಲ್ಲಿ ಒಂದೊಂದು ಗುಂಡಿಯಲ್ಲಿ ಎರಡು ಮೂರು ಜನರನ್ನು ಅಂತ್ಯ ಸಂಸ್ಕಾರ ಮಾಡಿದ್ದೇವೆ. ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಜಗಳ ಮಾಡಿಕೊಂಡೇ ಮಾಡಬೇಕು ಎಂದು ದಲಿತ ನಿವಾಸಿಗಳು ನೋವನ್ನು ತೋಡಿಕೊಂಡಿದ್ದಾರೆ.
ಕಾಲೋನಿಯಲ್ಲಿ ಸಮಸ್ಯೆ ಇರುವ ಬಗ್ಗೆ ಅರ್ಜಿ ಬಂದಿಲ್ಲ. ಒಂದು ವರ್ಷದ ಹಿಂದೆ ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಕೊಟ್ಟಿರುವವರಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಅನುದಾನ ನೀಡಲಾಗಿದೆ. ಶೌಚಾಲಯ ಕಟ್ಟಿಕೊಳ್ಳಲು ಅರಿವು ಮೂಡಿಸಿದರೂ ಕಟ್ಟಿಕೊಂಡಿರುವುದಿಲ್ಲ. ಸರ್ವ ಸದಸ್ಯರ ಸಭೆಯಲ್ಲಿ ಕಾಲೋನಿಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. – ಉಷಾ | ಪಿಡಿಒ, ಜಾಲಿಗೆ ಗ್ರಾಪಂಅರದೇನಹಳ್ಳಿ ಗ್ರಾಮದಲ್ಲಿನ ದಲಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರಕಾರಿ ಭೂಮಿ ಗುರ್ತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಭೂಮಿ ಮಂಜೂರು ಮಾಡಲಾಗುತ್ತದೆ. – ಅರುಳ್‌ಕುಮಾರ್ | ಉಪವಿಭಾಗಾಧಿಕಾರಿ, ದೊಡ್ಡಬಳ್ಳಾಪುರ
Be the first to comment