ರಾಜ್ಯ ಸುದ್ದಿಗಳು
ದೇವನಹಳ್ಳಿ
ದಲಿತರ ಸಮಸ್ಯೆಗಳಿಗೆ ಸ್ಪಂಧಿಸಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ. ತಮ್ಮ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ವಿಶ್ವನಾಥಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಟಿ.ವೆಂಕಟೇಶ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲರೂ ಕಾನೂನಿಗೆ ತಲೆಬಾಗಬೇಕು. ಕಾನೂನು ಇರುವುದೇ ರಕ್ಷಣೆಗಾಗಿ, ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿರುವ ದೂರುಗಳಿಗೆ ಸ್ಪಂಧಿಸಿ ಈಗಾಗಲೇ ಸುಮಾರು ೧೩ಕ್ಕೂ ಹೆಚ್ಚು ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಏನೇ ಸಮಸ್ಯೆಗಳು ಇದ್ದರೆ ಠಾಣಾಧಿಕಾರಿಯವರನ್ನು ೨೪/೭ ಸಂಪರ್ಕಿಸಬಹುದು. ಕಾನೂನು ಬಾಹಿರ ಚಟುವಟಿಕೆಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನನ್ನು ಯಾರು ಕೈಗೆತ್ತಿಕೊಳ್ಳಬಾರದು. ದ್ವೇಷ, ಅಸೊಯೆಯನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಒಮ್ಮತದಿಂದ ಶಾಂತಿಯುತವಾಗಿ ಬಾಳಬೇಕು. ಈಗಾಗಲೇ ಬೆಟ್ಟೇನಹಳ್ಳಿ, ಅರದೇಶನಹಳ್ಳಿ, ಸಿಂಗ್ರಹಳ್ಳಿ, ಸಾವಕನಹಳ್ಳಿ, ಕಾರಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಲಹೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಿಂದ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದರು. ಮುಂದಿನ ದಿನಗಳಲ್ಲಿ ದಲಿತ ಗ್ರಾಮಗಳಿಗೆ ಹೋಗಿ ಸ್ಥಳದಲ್ಲಿಯೇ ಸಭೆಯನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಈ ವೇಳೆಯಲ್ಲಿ ಪ್ರೋಬೆಷನರಿ ಸಬ್‌ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಪೊಲೀಸ್ ಸಿಬ್ಬಂದಿ, ದಲಿತ ಮುಖಂಡರು ಇದ್ದರು.
Be the first to comment