ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಉದ್ಘಾಟಿಸಿದ ಸಚಿವ ಶಿವರಾಮ್ ಹೆಬ್ಬಾರ್

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ:

CHETAN KENDULI

ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಿಸಿರುವ ಪ್ರಯೋಗಾಲಯವನ್ನು ಶನಿವಾರ ಉದ್ಘಾಟಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಬಹಳ ಬೇಡಿಕೆಯ ಪ್ರಯೋಗಾಲಯ ಇದಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಈ ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ ಎಂದರು. ಕೋವಿಡ್ ಹೆಚ್ಚಳವಾದ ಸಂದರ್ಭದಲ್ಲಿ ಈ ಪ್ರಯೋಗಾಲಯ ಹೆಚ್ಚಿನ ಸಹಕಾರಿಯಾಗಲಿದೆ ಎಂದ ಅವರು, ಕೋವಿಡ್ ಕಾರಣಕ್ಕೆ ಹಲವು ಜೀವಗಳನ್ನು ಕಳೆದುಕೊಂಡಿದ್ದೇವೆ. ಅದೇ ರೀತಿ ಕೋವಿಡ್ ಕಾರಣಕ್ಕೆ ಆರೋಗ್ಯ ಕ್ಷೇತ್ರ ಸಾಕಷ್ಟು ಸುಧಾರಿಸಿದೆ. ಹಲವು ಸೌಲಭ್ಯಗಳನ್ನು ಹೊಂದಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಶೇ. 92ರಷ್ಟು ಲಸಿಕೆ ವಿತರಣೆ ಪೂರ್ಣವಾಗಿದೆ. ಕರೊನಾಕ್ಕೆ ಹೆದರುವ ಕಾಲ ದೂರವಾಗಿದೆ. ಎಚ್ಚರಿಕೆ ತೆಗೆದುಕೊಳ್ಳಬೇಕಿದೆ ಎಂದ ಅವರು, ಆರೋಗ್ಯ ಕ್ಷೇತ್ರದಿಂದ ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರವೇ ಮುಂದಾಗಿ ಸೌಲಭ್ಯ ಕಲ್ಪಿಸುತ್ತಿದೆ. ಜನರು ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜನರಿಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ಸರ್ಕಾರ ನೂತನ ಪ್ರಯೋಗಾಲಯ ಆರಂಭಿಸಿದೆ. ಇದು ಕರೊನಾ ನಿರ್ಮೂಲನೆಯಲ್ಲಿ ಸಹಾಯಕವಾಗಲಿದೆ ಎಂದರು. ಖಾಸಗಿ ವಲಯಕ್ಕಿಂತ ಸರ್ಕಾರಿ ವಲಯ ಉತ್ತಮವಾಗಿಡಲು ಸರ್ಕಾರ ಸದಾ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಬಲವರ್ಧನೆಗೊಳ್ಳುತ್ತಿವೆ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಿಇಓ ಪ್ರಿಯಾಂಗಾ ಎಂ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ರಮೇಶ ಚೌಗಲೆ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ತಹಸೀಲ್ದಾರ ಎಂ. ಆರ್.ಕುಲಕರ್ಣಿ ಇದ್ದರು. ಡಿಎಚ್‍ಓ ಶರದ್ ನಾಯಕ ಸ್ವಾಗತಿಸಿದರು.ಆಸ್ಪತ್ರೆ ಆಡಳಿತಾಧಿಕಾರಿ ಗಜಾನನ ಭಟ್ಟ ನಿರೂಪಿಸಿದರು.

Be the first to comment

Leave a Reply

Your email address will not be published.


*