ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಕೊಯಿರ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸುತ್ತಮುತ್ತಲಿನ ಮನೆಗಳಿಂದ ಬರುವ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದ್ದು, ಸರಿಯಾದ ರಸ್ತೆ-ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಲೋನಿಯಲ್ಲಿ ಸರಕಾರಿ ಶಾಲೆಯ ಪಕ್ಕದಲ್ಲಿಯೇ ಹಾದು ಹೋಗುವ ದಾರಿಯಾಗಿದ್ದು, ಶಾಲೆಗೆ ಹೋಗುವ ಮಕ್ಕಳಿಗೂ ಸಹ ಕಿರಿಕಿರಿಯನ್ನುಂಟು ಮಾಡುತ್ತಿದೆ. ಈಗಾಗಲೇ ಅವ್ಯವಸ್ಥೆಯ ಬಗ್ಗೆ ಗ್ರಾಪಂಗೆ ಮೌಖಿಕವಾಗಿ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಹೋಗಬೇಕಾದರೆ ಜಾರುತ್ತಿದ್ದು, ದ್ವಿಚಕ್ರವಾಹನದಲ್ಲಿಯೂ ಸಹ ಹೋಗಲು ಆಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಮುಖಂಡ ನಾಗರಾಜ್ ಮಾತನಾಡಿ, ಮಳೆ ಬಂದಾಗಿನಿಂದಲೂ ಈ ರಸ್ತೆಯಲ್ಲಿ ಸಂಚರಿಸಲು ಆಗುತ್ತಿಲ್ಲ. ಇತ್ತಿಚೆಗಷ್ಟೇ ದ್ವಿಚಕ್ರವಾಹನ ಸವಾರರೊಬ್ಬರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಳೆ ನೀರು, ಮನೆಗಳಿಂದ ಹೊರಬರುವ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದೆ. ಇತ್ತ ಯಾರು ಗಮನಹರಿಸುತ್ತಿಲ್ಲ. ಆರೋಗ್ಯದ ಮೇಲೆಯೂ ಸಹ ಗಂಭೀರ ಪರಿಣಾಮ ಬೀರುತ್ತಿದೆ. ಆದಷ್ಟು ಬೇಗ ರಸ್ತೆ ಮತ್ತು ಚರಂಡಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
Be the first to comment