ಜಿಲ್ಲಾ ಸುದ್ದಿಗಳು
ಕಾರವಾರ
ದೇಶದ ಭದ್ರತಾ ಯೋಜನೆಯಾದ ಕದಂಬ ನೌಕಾನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆ ಕದಂಬ ನೌಕಾನೆಲೆ ಪಡೆದಿದ್ದರೂ, ಯೋಜನೆ ನಿರ್ಮಾಣಕ್ಕೆ ಮಾತ್ರ ಸಾವಿರಾರು ಕುಟುಂಬ ತಮ್ಮ ಮನೆ ಜಮೀನುಗಳನ್ನು ನೀಡಿ ನಿರಾಶ್ರಿತರಾಗಿ ಇನ್ನು ಸಂಕಷ್ಟದಲ್ಲಿದ್ದಾರೆ. ತಾಲೂಕಿನ ಬೈತ್ಕೋಲ ಬಂದರು ಸಮೀಪ ನೌಕಾನೆಲೆ ಅಧಿಕಾರಿಗಳು ಭೂಮಿ ಓತ್ತುವರಿ ಮಾಡಿಕೊಳ್ಳಲು ಮುಂದಾಗಿರುವುದು ಜನರ ಆಕ್ರೋಶಕ್ಕೆ ಮತ್ತೆ ಕಾರಣವಾಗಿದೆ.ಕದಂಬ ನೌಕಾನೆಲೆ ದೇಶದ ಅತಿದೊಡ್ಡ ನೌಕಾನೆಲೆಯಾಗಿದೆ. ಇಷ್ಟೇ ಅಲ್ಲದೇ ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಸಹ ಕದಂಬ ನೌಕಾನೆಲೆ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ನಿರ್ಮಾಣವಾದ ಕದಂಬ ನೌಕಾನೆಲೆಗೆ ಈ ಹಿಂದೆ ಸಾವಿರಾರು ಕುಟುಂಬಗಳು ತಮ್ಮ ಮನೆ ಜಮೀನುಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿದ್ದರು. ಕೃಷಿ ಭೂಮಿಯನ್ನು ಬಿಟ್ಟು ರೈತರು, ಹಲವಾರು ಸಮುದ್ರ ಭಾಗವನ್ನು ಬಿಟ್ಟುಕೊಟ್ಟು ಮೀನುಗಾರರು ಇಂದಿಗೂ ಸಂಕಷ್ಟದಲ್ಲಿದ್ದಾರೆ.
ಇದರ ನಡುವೆ ತಾಲೂಕಿನ ಬೈತ್ಕೋಲ ಬಂದರು ಸಮೀಪ ನೌಕಾನೆಲೆ ಅಧಿಕಾರಿಗಳು ಭೂಮಿ ಒತ್ತುವರಿ ಮಾಡಿ ಕಾಂಪೌಂಡ್ ಕಟ್ಟಲು ಮುಂದಾಗಿರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೈತ್ಕೋಲ ಬಂದರು ಸಮೀಪ ಇರುವ ಗುಡ್ಡದ ಪ್ರದೇಶ ಕದಂಬ ನೌಕಾನೆಲೆಗೆ ಸೇರಿದ್ದಾಗಿದ್ದು, ಈ ಪ್ರದೇಶದಲ್ಲಿ ಅತಿಥಿಗೃಹ ಕಟ್ಟಲು ಕಾಂಪೌಂಡ್ ಮಾಡೋ ಉದ್ದೇಶದಿಂದ ಬೈತ್ಕೋಲ ಬಳಿಯ ಪ್ರದೇಶವನ್ನು ಓತ್ತುವರಿ ಮಾಡಿಕೊಳ್ಳಲು ನೌಕಾನೆಲೆ ಅಧಿಕಾರಿಗಳು ಮುಂದಾಗಿದ್ದಾರೆ. ನಿನ್ನೆ (ಅಕ್ಟೋಬರ್ 18) ಭೂಮಿ ಒತ್ತುವರಿ ಮಾಡಿಕೊಳ್ಳಲು, ಸರ್ವೆ ಮಾಡಲು ನೌಕಾನೆಲೆ ಅಧಿಕಾರಿಗಳು ಆಗಮಿಸಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿ ಅಧಿಕಾರಿಗಳು ಸರ್ವೆ ಮಾಡದಂತೆ ತಡೆದು ವಾಪಾಸ್ ಕಳಿಸಿದರು.
ಅತಿಥಿ ಗೃಹ ಗುಡ್ಡದ ಮೇಲೆ ಮಾಡಲು ಜೆಸಿಬಿಗಳನ್ನು ಬಳಸಿ, ಗುಡ್ಡದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಿದ್ದು, ಒಂದೊಮ್ಮೆ ಇಂತಹ ಕಾಮಗಾರಿ ನಡೆದರೆ ಗುಡ್ಡದ ಕೆಳಗೆ ಸುಮಾರು ಮುನ್ನೂರಕ್ಕೂ ಅಧಿಕ ಮನೆಗಳಿದ್ದು, ಗುಡ್ಡ ಕುಸಿತವಾದರೆ ಮನೆಗಳಿಗೆ ಸಮಸ್ಯೆ ಎದುರಾಗಲಿದೆ ಎನ್ನುವುದು ಸಾರ್ವಜನಿಕರ ಆಕ್ರೋಶ. ಇದಲ್ಲದೇ ಕದಂಬ ನೌಕಾನೆಲೆಗೆ ಕಾರವಾದಿಂದ ಅಂಕೋಲಾ ವರೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿದ್ದು ಬೇರೆ ಸ್ಥಳದಲ್ಲಿ ಅತಿಥಿಗೃಹ ಮಾಡಿಕೊಳ್ಳಲಿ, ಅದನ್ನು ಬಿಟ್ಟು ಜನವಸತಿ ಇರೋ ಬೈತ್ಕೋಲ ಸಮೀಪದಲ್ಲೇ ಯಾಕೆ ಮಾಡಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಂದೊಮ್ಮೆ ಇಂತಹ ಕಾಮಗಾರಿಗೆ ಮುಂದಾದರೆ ಮುಂದಿನ ದಿನದಲ್ಲಿ ಹೋರಾಟ ಅನಿವಾರ್ಯ ಎಂದು ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಹೇಳಿದ್ದಾರೆ.
ಬೈತ್ಕೋಲ ಗುಡ್ಡದ ಮೇಲೆ ಕಾಂಪೌಂಡ್ ನಿರ್ಮಾಣ ಮಾಡಲು ಸಾರ್ವಜನಿಕರು ಸಹಕರಿಸುವಂತೆ ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿಕೊಂಡರು. ಬೈತ್ಕೋಲದಲ್ಲಿ ಈ ಸಂಬಂಧ ಸಭೆಯನ್ನು ಸಹ ನಡೆಸಿದರು. ಆದರೆ ಸಾರ್ವಜನಿಕರು ಮಾತ್ರ ಯಾವುದೇ ಕಾರಣಕ್ಕೂ ಕಾಂಪೌಂಡ್ ನಿರ್ಮಾಣ ಬೇಡ ಎಂದು ಪಟ್ಟುಹಿಡಿದರು. ಒಟ್ಟಿನಲ್ಲಿ ಜನ ವಸತಿ ಪ್ರದೇಶ ಸಮೀಪದಲ್ಲೇ ಮತ್ತೆ ನೌಕಾನೆಲೆಯ ಅತಿಥಿಗೃಹ ನಿರ್ಮಿಸಲು ಮುಂದಾಗಿರುವುದು ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Be the first to comment