ರಾಜ್ಯ ಸುದ್ದಿಗಳು
ದೇವನಹಳ್ಳಿ
ಗ್ರಾಮೀಣ ಭಾಗದಲ್ಲಿ ರೈತರಿಗೆ ಕೆರೆಯ ಅಭಿವೃದ್ಧಿ ಸಂಜೀವಿನಿಯಾಗಿದೆ ಎಂದು ಸಮಾಜ ಸೇವಕ ಜುಟ್ಟನಹಳ್ಳಿ ಚೇತನ್‌ಗೌಡ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕೊಯಿರ ಮತ್ತು ವಿಶ್ವನಾಥಪುರ ಜೋಡಿ ಗ್ರಾಪಂಗಳ ವಾಜರಹಳ್ಳಿ-ಬ್ಯಾಡರಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕೆರೆಯು ಈ ಹಿಂದೆ ಹಾಳಾಗಿತ್ತು. ಕೆರೆಯನ್ನು ಅಭಿವೃದ್ಧಿ ಪಡಿಸಲು ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸಿ.ಎಸ್.ಕರೀಗೌಡ ಅವರ ನೇತೃತ್ವದಲ್ಲಿ ಕೆರೆ ಹೂಳು ಕಾರ್ಯ ಮಾಡಲಾಗಿತ್ತು. ಇದೀಗ ಸತತವಾಗಿ ಬಿದ್ದಂತಹ ಮಳೆಯಿಂದಾಗಿ ಕೆರೆಯು ತುಂಬಿ ತುಳುಕುತ್ತಿರುವುದು ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಕೆರೆಯಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ನೂರಾರು ರೈತರ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಗೊಂಡಿದ್ದು, ನೀರಿನ ಅಭಾವ ನೀಗಿದೆ. ಕೆರೆ ಕೋಡಿ ಹರಿಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಹಿರಿಯ ರೈತ ಮುಖಂಡ ಎನ್.ಅಶ್ವತ್ಥಪ್ಪ ಮಾತನಾಡಿ, ರೈತರು ನೀರಿನ ಅಭಾವದ ನಡುವೆ ಬೆಳೆ ಇಡಲು ಕಷ್ಟವಾಗಿದ್ದ ಪರಿಸ್ಥಿತಿ ಇತ್ತು. ಇದೀಗ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಬೆಳೆಯನ್ನಿಡಲು ನೀರಿನ ಅಭಾವ ತಲೆದೂರುವುದಿಲ್ಲ. ಜತೆಗೆ ಬೆಳೆಗೆ ಬೇಕಾದಷ್ಟು ನೀರು ಇರುವುದು ಪುಣ್ಯವಾಗಿದೆ. ಸಮಾಜ ಸೇವಕ ಚೇತನ್‌ಗೌಡ ಮತ್ತು ಜಿಲ್ಲಾಧಿಕಾರಿಯಾಗಿದ್ದ ಸಿ.ಎಸ್.ಕರೀಗೌಡ ಅವರ ಮುಂದಾಲೋಚನೆಯಿಂದಾಗಿ ಇದೀಗ ಕೆರೆ ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿದೆ ಎಂದರು.
ಕೃಷಿಕ ಸಮಾಜದ ನಿರ್ದೇಶಕ ಎಚ್.ಎಂ.ರವಿಕುಮಾರ್ ಮಾತನಾಡಿ, ಗ್ರಾಮದಲ್ಲಿ ಒಂದು ಕೆರೆ ಅಭಿವೃದ್ಧಿಗೊಂಡರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರು ಲಭ್ಯವಾಗುತ್ತದೆ. ಈ ಭಾಗದಲ್ಲಿ ನೀರಿಗಾಗಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಇತ್ತು. ಕೆರೆಯೂ ಸಂಪೂರ್ಣವಾಗಿ ಹೂಳಿನಿಂದ ತುಂಬಿದ್ದನ್ನು ಗಮನಿಸಿ ಹೂಳೆತ್ತಿದ್ದರಿಂದ ಇಂದು ನೀರು ಕೆರೆಯಲ್ಲಿ ನಿಲ್ಲುವಂತೆ ಆಗಿದೆ. ಇಂತಹ ಹತ್ತಾರು ಕೆರೆಗಳಿಗೆ ಮರುಜೀವ ಕೊಡುವಂತೆ ಆಗಬೇಕು ಎಂದು ಹೇಳಿದರು.ಈ ವೇಳೆಯಲ್ಲಿ ಗ್ರಾಪಂ ಸದಸ್ಯೆ ವೀಣಾರವಿಕುಮಾರ್, ಮುಖಂಡರಾದ ನಂಜೇಗೌಡ, ಎಚ್.ಎನ್.ಗೌಡಪ್ಪ, ಕೃಷ್ಣಮೂರ್ತಿ, ಬ್ಯಾಡರಹಳ್ಳಿ ಮೂರ್ತಿ, ಚಂದ್ರೇಗೌಡ, ಎನ್.ಕೃಷ್ಣಮೂರ್ತಿ, ರಘು, ಬ್ಯಾಡರಹಳ್ಳಿ ಜಿ.ರಾಜಣ್ಣ, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
Be the first to comment