ಜಿಲ್ಲಾ ಸುದ್ದಿಗಳು
ಕುಮಟಾ
ನಿವೃತ್ತ ವೇತನ ದೊರೆಯದೇ ತೊಂದರೆಗೊಳಗಾದ ಇಬ್ಬರು ನಿವೃತ್ತ ಶಿಕ್ಷಕಿಯರಿಗೆ ಶಾಸಕ ದಿನಕರ ಶೆಟ್ಟಿ ಅವರು ತಕ್ಷಣ ಪೇನ್ಶನ್ ದೊರಕಿಸಿಕೊಡುವ ಮೂಲಕ ನಿವೃತ್ತ ಶಿಕ್ಷಕಿಯರಿಗೆ ಸಹಾಯ ಮಾಡಿದ್ದಾರೆ.ಶಾಸಕ ದಿನಕರ ಶೆಟ್ಟಿ ಅವರು ಪ್ರತಿ ಶುಕ್ರವಾರ ಕುಮಟಾ ತಹಸೀಲ್ದಾರ ಕಚೇರಿಗೆ ತೆರಳಿ, ಕಚೇರಿ ಕೆಲಸಕ್ಕಾಗಿ ಬಂದಂತಹ ಜನರ ಅಹವಾಲು ಸ್ವೀಕರಿಸಿ, ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡುವಂತೆ ಸಂಬAಧಿತ ಅಧಿಕಾರಿಗಳಿಗೆ ಸೂಚಿಸುತ್ತಾರೆ.
ಅದರಂತೆ ಇವತ್ತು ಶಾಸಕರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದಾಗ, ಇಬ್ಬರು ನಿವೃತ್ತ ಶಿಕ್ಷಕಿಯರು ತಮ್ಮ ನಿವೃತ್ತ ವೇತನ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಕಚೇರಿಯಲ್ಲಿ ಕುಳಿತಿದ್ದರು. ಅವರ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ಶಾಸಕರು ಪತ್ರಾಂಕಿತ ಉಪ ಖಜಾನೆ ಅಧಿಕಾರಿ ಬಿ.ಡಿ.ನಾಯ್ಕ ಅವರನ್ನು ಸಂಪರ್ಕಿಸಿ, ಇಬ್ಬರು ನಿವೃತ್ತ ಶಿಕ್ಷಕರಿಗೆ ಕೂಡಲೇ ವೇತನ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಕಾರ್ಯೋನ್ಮುಖವಾದ ಉಪಖಜಾನೆ ಅಧಿಕಾರಿ, ಕೆಳ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಯ ನೆರವಿನಿಂದ ತೊಂದರೆ ಸರಿಪಡಿಸಿ, ನಿವೃತ್ತ ವೇತನ ದೊರೆಯುವಂತೆ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಪ್ರತಿ ಶುಕ್ರವಾರ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕರ ಸಮಸ್ಯೆ ಆಲಿಸಿ, ಆ ಸಮಸ್ಯೆಗಳನ್ನು ಪರಿಹರಿಸಿ ಕೊಡುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದೇನೆ. ಇಬ್ಬರು ನಿವೃತ್ತ ಶಿಕ್ಷಕರಿಗೆ ನಿವೃತ್ತ ವೇತನ ದೊರೆಯಲು ತೊಂದರೆಯಾಗಿರುವ ಬಗ್ಗೆ ತಿಳಿದುಕೊಂಡ ನಾನು ತಕ್ಷಣ ಸಂಬಂಧಪಟ್ಟ ಅಧಿಕಾರಿಯನ್ನು ಕರೆದು, ವೇತನ ಸಿಗುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅವರು ಉಳಿದ ಅಧಿಕಾರಿ ಹಾಗೂ ಸಿಬ್ಬಂದಿಯ ಸಹಕಾರದಿಂದ ಒಂದೇ ದಿನದಲ್ಲಿ ವೇತನ ದೊರೆಯುವಂತೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಇದೇ ರೀತಿಯಲ್ಲಿ ಸಾರ್ವಜನಿಕರ ಕೆಲಸ ಆಗಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಪತ್ರಾಂಕಿತ ಉಪಖಜಾನೆ ಅಧಿಕಾರಿ ಬಿ.ಡಿ.ನಾಯ್ಕ, ಕಲ್ಲಬ್ಬೆ ಗ್ರಾ.ಪಂ ಸದಸ್ಯ ರವಿ ಹೆಗಡೆ ಸೇರಿದಂತೆ ಮತ್ತಿತರರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ತಿತರಿದ್ದರು.
Be the first to comment