ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಸತತವಾಗಿ ಬಿದ್ದಂತಹ ಮಳೆಯಿಂದಾಗಿ ಕೊಯಿರ ಕೆರೆ ತುಂಬಿ ಹರಿಯುತ್ತಿರುವುದರಿಂದ ಗ್ರಾಮಸ್ಥರ ಮತ್ತು ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಬಾಗೀನ ಸಮರ್ಪಣೆ ಕಾರ್ಯವನ್ನು ನೆರವೇರಿಸಲಾಗಿದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಅರ್ಕಾವತಿ ಮೊದಲ ಕೊಯಿರ ಕೆರೆಯಂಗಳದಲ್ಲಿ ಕೆರೆಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೆರೆಯ ಅಭಿವೃದ್ಧಿ ಕೆಲಸಗಳು ಈಗಾಗಲೇ ನಡೆಯುತ್ತಿದೆ. ಕೆರೆಯ ಸುತ್ತ ಸುಮಾರು ೨೦-೨೫ಎಕರೆ ಜಮೀನುಗಳಲ್ಲಿ ಭತ್ತದ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಕೆರೆಯ ನೀರಿನ ಸದುಪಯೋಗವನ್ನು ರೈತರು ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಸುಮಾರು ದಿನಗಳಿಂದ ಈ ಕೆರೆ ಮುಚ್ಚಿದ್ದರಿಂದ ಒಳ ಕಾಲೂವೆಗಳಲ್ಲಿ ಮಣ್ಣು ತುಂಬಿಕೊಂಡು ಮುಚ್ಚುಹೋಗಿದ್ದವು. ಅವುಗಳನ್ನು ತೆರೆದು ಮುಂದಿನ ದಿನಗಳಲ್ಲಿ ರೈತರಿಗೆ ಸಮರ್ಪಕವಾಗಿ ಈ ನೀರಿನ ಉಪಯೋಗವಾಗುವಂತೆ ಕೆಲಸವನ್ನು ಮಾಡಲಾಗುತ್ತದೆ. ಎಲ್ಲರೂ ಒಟ್ಟಾಗಿ ಬಾಗೀನ ಅರ್ಪಿಸುವಂತಹ ಕಾರ್ಯ ಸಾಂಪ್ರದಾಯಿಕವಾಗಿ ಮಾಡಲಾಗಿದೆ. ಉತ್ತಮ ಮಳೆಯಾಗಿರುವುದರಿಂದ ಕೆರೆ ತುಂಬಿ ತುಳುಕುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ರಾಜವಿಲಾಸ್ ಬೆಂಗಳೂರು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಸಂಜಯ್ ಕೃಷ್ಣ ಮಾತನಾಡಿ, ಕೆರೆಯು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಆಗಬೇಕು. ಇಲ್ಲಿನ ಕೆರೆಯ ಅಭಿವೃದ್ಧಿಯಿಂದಾಗಿ ಸಾಕಷ್ಟು ಜಾನುವಾರುಗಳಿಗೆ, ಪಕ್ಷಿಪ್ರಭೇದಗಳಿಗೆ ಆಧಾರವಾಗುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಈ ಕೆರೆಯ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಕೇವಲ ನೀರನ್ನು ನಿಲ್ಲಿಸುವುದಷ್ಟೇ ಅಲ್ಲ, ಬಯೋಡೈವರ್ಸಿಟಿ, ಇಕೋ ಸಿಸ್ಟಂ ಅನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಈ ಕೆರೆಗೆ ಬೇರೆ ಬೇರೆ ಕಡೆಗಳಿಂದ ಪಕ್ಷಿಗಳು ಬರುತ್ತವೆ. ನಂದಿಬೆಟ್ಟ ತಪ್ಪಲು ಪ್ರದೇಶವಾಗಿರುವುದರಿಂದ ಪ್ರಾಣಿ-ಪಕ್ಷಿಗಳಿಗೆ ಕೆರೆ ನೀರು ಅನುಕೂಲವಾಗುತ್ತದೆ. ಈ ಕೆರೆ ನೀರಿನಿಂದ ಈ ಭಾಗದ ರೈತರು ಭತ್ತ ಬೆಳೆಯಲು ಸಹಕಾರಿಯಾಗಿದೆ. ಕೆರೆಯ ಹೂಳು ಕಾರ್ಯ ಪ್ರಗತಿಯಲ್ಲಿದೆ. ಅರ್ಧದಷ್ಟು ಮಾತ್ರ ಹೂಳು ಕಾರ್ಯ ಆಗಿದೆ. 2022ರ ವೇಳೆ ಕೆರೆಯ ಸಮಗ್ರ ಕೆಲಸ ಪೂರ್ಣಗೊಳ್ಳಲಿದೆ. ಸುಮಾರು ೭೦-೮೦ಲಕ್ಷ ರೂ.ಗಳ ಕ್ರಿಯಾಯೋಜನೆಯಲ್ಲಿ 20-25ಲಕ್ಷ ರೂ. ಇದುವರೆಗೆ ಖರ್ಚು ಬಂದಿದೆ. ಉಳಿಕೆ ಕೆಲಸಗಳು ಪೂರ್ಣಗೊಳ್ಳುವಲ್ಲಿ ಮತ್ತಷ್ಟು ಕೆರೆ ಗಮನಸೆಳೆಯುವುದರ ಜತೆಗೆ ಮಾದರಿಯಾಗಲಿದೆ ಎಂದರು.
ಕೊಯಿರ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎನ್.ರಮೇಶ್‌ಬಾಬು ಮಾತನಾಡಿ, ಈ ಹಿಂದೆ ಕೆರೆ ಕುಂಟೆಯಂತೆ ಭಾಸವಾಗುತ್ತಿತ್ತು. ತದ ನಂತರ ಗ್ರಾಮಸ್ಥರ ಮತ್ತು ಜಿಲ್ಲಾಡಳಿತ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಒಂದು ವರ್ಷದ ನಂತರ ಅರ್ಧಕ್ಕೆ ನಿಂತಿದ್ದ ಕೆರೆ ಅಭಿವೃದ್ಧಿ ಪಡಿಸಲು ರೋಟರಿ ಸಂಸ್ಥೆ ಕೈಜೋಡಿಸಿದ ಕಾರಣ ಇಂದು ಉತ್ತಮ ಕೆರೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆಯನ್ನು ಅಭಿವೃದ್ಧಿಪಡಿಸಲು ಎಲ್ಲಾ ಗ್ರಾಮಸ್ಥರನ್ನು ಒಳಗೊಂಡಂತೆ ಕೈಜೋಡಿಸಲಾಗುತ್ತದೆ ಎಂದರು.
ಈ ವೇಳೆಯಲ್ಲಿ ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್, ಕೊಯಿರ ಚಿಕ್ಕೇಗೌಡ, ಕೆ.ಹೊಸೂರು ಶ್ರೀನಿವಾಸ್ (ಎಚ್‌ವಿಎಸ್), ಕೆರೆ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರು, ಪದಾಧಿಕಾರಿಗಳು, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದ್ದರು.
Be the first to comment