ಜಿಲ್ಲಾ ಸುದ್ದಿಗಳು
ಕಾರವಾರ
ಗುತ್ತಿಗೆ ನೀಡುವ ವಿಷಯದಲ್ಲಿ ಅಧಿಕಾರಿಗಳು ನಿಯಮ ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾರವಾರದ ನೊಂದಾಯಿತ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾದವ ನಾಯ್ಕ ಅವರು ನಗರದಲ್ಲಿ ಇಂದು ಆರೋಪ ಮಾಡಿದ್ದಾರೆ.
ಪ್ಯಾಕೆಜ್ ಟೆಂಡರ್ ಮೂಲಕ ಮತ್ತು ತುಂಡು ಗುತ್ತಿಗೆ ನೀಡುವುದನ್ನು ಸ್ಥಳೀಯ ಗುತ್ತಿಗೆದಾರರು ವಿರೋಧಿಸಿದ ನಂತರ ಈಗ ಮತ್ತೊಂದು ರೀತಿಯಲ್ಲಿ ಅವರಿಗೆ ಕಿರುಕುಳ ನೀಡುವ ಕೆಲಸ ಆರಂಭವಾಗಿದೆ.
ಜನಪ್ರತಿನಿಧಿಗಳು ಕಮಿಷನ್ ಆಸೆಗೆ ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲು ಕಡಿವಾಣ ಬಿದ್ದ ಬಳಿಕ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಿಂಬಾಗಿಲ ಮೂಲಕ ಗುತ್ತಿಗೆ ನೀಡುವಂತೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಧಿಕಾರಿಗಳು ಟೆಂಡರ್ ಪಡೆಯಲು ಸ್ಥಳೀಯ ಗುತ್ತಿಗೆದಾರರು ಅರ್ಹರಿದ್ದರೂ ಸಹ ಅವರನ್ನು ಅನರ್ಹರೆಂದು ಮಾಡಿ ಬೇರೆ ಜಿಲ್ಲೆಗಳ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದು ನಿಯಮಕ್ಕೆ ವಿರೋಧವಾಗಿದೆ. ಸರ್ಕಾರದ ಆದೇಶದ ನಿಯಮ ಪಾಲಿಸದ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ ಕೃತ್ಯ ಮಾಡುತ್ತಿದ್ದಾರೆ. ಇದನ್ನು ನೊಂದಾಯಿತ ಗುತ್ತಿಗೆದಾರರ ಸಂಘವು ತೀವೃವಾಗಿ ಖಂಡಿಸುತ್ತದೆ ಎಂದು ನೊಂದಾಯಿತ ಗುತ್ತಿಗೆ ಸಂಘದ ಅಧ್ಯಕ್ಷ ಮಾದವ ನಾಯ್ಕ ಅವರು ತಿಳಿಸಿದ್ದಾರೆ.
ಯಾವುದೋ ಒತ್ತಡಕ್ಕೆ ಮಣಿದು ಸ್ಥಳೀಯ ಗುತ್ತಿಗೆದಾರರ ಕಾಮಗಾರಿಗಳನ್ನು ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮೂಲಕ ಪಡೆಯಬಹುದಾಗಿದ್ದರೂ ಸಹ ಅದನ್ನು ತಪ್ಪಿಸಲು ಹೊರಟ ಅಧಿಕಾರಿಗಳು ತಾವು ಮಾಡಿದ ತಪ್ಪಿಗೆ ತಲೆದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
Be the first to comment