ರಾಜ್ಯ ಸುದ್ದಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ ಜಿಲ್ಲೆಯಲ್ಲಿ ಶೀಘ್ರವೇ ಕಸ ವಿಂಗಡಣೆ ಹಾಗೂ ವಿಲೇವಾರಿ ಸಮಸ್ಯೆಗಳನ್ನು ಬಗೆ ಹರಿಸಿ, ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಗಾಂಧೀಜಿ ಕಂಡ ಕನಸನ್ನು ನನಸು ಮಾಡಬೇಕು ಎಂದು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಎಲ್.ಎನ್. ಅವರು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಇವರ ಸಹಯೋಗದೊಂದಿಗೆ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸ್ವಚ್ಛತಾ ಆಂದೋಲನ ಹಾಗೂ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸಿ, ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ದೇವನಹಳ್ಳಿ ಕ್ಷೇತ್ರದಲ್ಲಿ ಉತ್ಪಾದನೆಯಾಗುವ ಕಸ ಹೆಚ್ಚಾಗಿದ್ದು, ಕಸ ವಿಂಗಡನೆ ಹಾಗೂ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರಲ್ಲದೆ ಕಸದ ವಾಸನೆ ಹೋಗಲಾಡಿಸಲು ಸಿಲಿಂಡರ್ ಗಳನ್ನೂ ಅಳವಡಿಸಿ ಕಸವನ್ನು ಸುಟ್ಟು ಹಾಕುವ ಕಾರ್ಯವನ್ನು ಶ್ರೀಘ್ರವಾಗಿ ನಡೆಸಬೇಕೆಂದು ಎಂದರು. ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಅವರು ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರಲ್ಲದೆ, ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.ದೇವನಹಳ್ಳಿ ತಾಲ್ಲೂಕು ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಕಬ್ಬಡಿ ಅಸೋಸಿಯೇಷನ್, ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನ್ಯಾಷನಲ್ ಕ್ರೆಡಿಟ್ ಕಾರ್ಪ್ ತಂಡದಿಂದ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಮುಖ್ಯ ಯೋಜನಾ ಅಧಿಕಾರಿ ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ರಮೇಶ್ ರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀ ನಾರಾಯಣ್, ಸದಸ್ಯರಾದ ಜಿ.ಎ.ರವೀಂದ್ರ, ಲೀಲಾವತಿ, ರತ್ನಮ್ಮ, ಕೋಮಲ ನಟರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಗೇಶ್, ತಹಶೀಲ್ದಾರ್ ಅನಿಲ್ ಕುಮಾರ್, ಪರಿಸರವಾದಿ ಗುರುದೇವ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ದೇವನಹಳ್ಳಿ ಕ್ರೀಡಾಂಗಣದಿಂದ ದೇವನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯವರೆಗೆ ಸ್ವಚ್ಛತೆಗಾಗಿ ಓಟ ಕಾರ್ಯಕ್ರಮಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಅವರು ಚಾಲನೆ ನೀಡಿದರು. ನಂತರ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡ ನೆಟ್ಟು ನೀರೆರೆಯಲಾಯಿತು. ತದನಂತರ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ಕೈಗೊಂಡರು.
Be the first to comment