ರಾಜ್ಯ ಸುದ್ದಿಗಳು
ದೇವನಹಳ್ಳಿ
ಶ್ರೀ ಮಹರ್ಷಿ ವಾಲ್ಮಿಕಿ ಅಧ್ಯಯನ ಪೀಠ ಸಂಶೋಧನ ಕೇಂದ್ರಕ್ಕೂ, ಸಾರ್ವಜನಿಕ ನಿವೇಶನಗಳಿಗೆ ಮೀಸಲಿಟ್ಟಿರುವ ಜಮೀನಿನನ್ನು ಅಧಿಕಾರಿಗಳು ಭೂ ಮಾಪನ ಮಾಡಿ, ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕು ಎಂದು ಹುರಳಗುರ್ಕಿ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದರು. ತಾಲೂಕಿನ ಹುರಳಗುರ್ಕಿ ಗ್ರಾಮದ ಸರ್ವೆ ನಂ.103, 104ರಲ್ಲಿನ ಸರಕಾರಿ ಜಾಗದಲ್ಲಿ ಈಗಾಗಲೇ ವೆಂಕಟಗಿರಿ ಕೋಟೆ ಗ್ರಾಪಂ ಅಧ್ಯಕ್ಷ ಎಚ್.ಶ್ರೀನಿವಾಸ್ ಎಂಬುವವರು ಅಕ್ರಮವಾಗಿ ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ಖಂಡಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಚಿನ್ನಪ್ಪ, ಚೇತನ್‌ಗೌಡ, ದ್ಯಾವರಹಳ್ಳಿ ವಿ.ಶಾಂತಕುಮಾರ್, ವಿಜಯಕುಮಾರ್, ಸುಧಾಕರ್, ಸಜ್ಜಾದ್‌ಪಾಶ, ಕಾಂಗ್ರೆಸ್ ಮುಖಂಡರು, ಗ್ರಾಮದ ಹಿರಿಯರು, ವಾಲ್ಮಿಕಿ ಸಮಾಜದ ಮುಖಂಡರು ಸ್ಥಳದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಅಕ್ರಮವಾಗಿ ಕಾನೂನು ಬಾಹಿರವಾಗಿ ಯಾರೇ ನಡೆದುಕೊಂಡರೂ ಅವರಿಗೆ ಕಾನೂನಿನಡಿಯಲ್ಲಿ ಕ್ರಮಜರುಗಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಗುಡುಗಿದರು.
ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಆರ್‌ಐ ಸೇರಿದಂತೆ ಹಲವಾರು ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಹಾಲಿ ಸರಕಾರಿ ಜಾಗವನ್ನು ಒಂದೇ ಕುಟುಂಬದ ಹಲವಾರು ಸಂಬಂಧಿಕರ ಹೆಸರಿನಲ್ಲಿ ಖಾತೆ ಮಾಡಿರುವುದನ್ನು ಗ್ರಾಮಸ್ಥರು ಖಂಡಿಸಿದ್ದು, ಇಡೀ ಗ್ರಾಮವೂ ಸರಕಾರಿ ಜಮೀನಿನಲ್ಲಿ ಇದುವರೆಗೂ ಗ್ರಾಮದ ಹಲವಾರು ಬಡಕುಟುಂಬಗಳಿಗೆ ಒಂದೇ ಒಂದು ನಿವೇಶನ ಕಲ್ಪಿಸಿರುವುದಿಲ್ಲ. ಈ ಜಾಗವನ್ನು ಸಾರ್ವಜನಿಕ ನಿವೇಶನಕ್ಕಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.
ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ವಿವಾದ ಸೃಷ್ಠಿಯಾಗಿರುವ ಹುರಳಗುರ್ಕಿ ಸರ್ವೆ ನಂ.103 ಮತ್ತು 104ರಲ್ಲಿನ ಸರಕಾರಿ ಜಮೀನು ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ 7 ಎಕರೆ 13 ಗುಂಟೆ ಜಾಗದಲ್ಲಿ ಮಹರ್ಷಿ ವಾಲ್ಮಿಕಿ ಅಧ್ಯಯನ ಪೀಠ ಸಂಶೋಧನ ಕೇಂದ್ರ ಸ್ಥಾಪನೆಗೆ ಆವತ್ತಿಗೆ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ, ಈ ಜಾಗವನ್ನು ಗುರ್ತಿಸಿ ಆವತ್ತಿಗೆ ಇದನ್ನು ಬಿಟ್ಟುಕೊಟ್ಟಿದ್ದಾರೆ. ಅದೇ ರೀತಿಯಾಗಿ ಉಳಿಕೆ ಜಮೀನು ಗ್ರಾಮದಲ್ಲಿನ ನಿವೇಶನ ರಹಿತರಿಗೆ 4ಎಕರೆ 30ಗುಂಟೆ ಜಾಗವನ್ನು ತಾಪಂ ಇಒ ಹೆಸರಿಗೆ ಹಸ್ತಾಂತರ ಮಾಡಿ ಜಾಗವನ್ನು ಖಾಯ್ದಿರಿಸಿದ್ದಾರೆ. ಹೀಗಿರುವಾಗ ಏಕಾಏಕೀ ಸರಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿದ ಯಾರೇ ಆಗಲಿ ಅವರು ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ಭೂಮಿ ಮಂಜೂರು ಮಾಡಬೇಕಾದರೆ ಸಾಕಷ್ಟು ಕಾನೂನುಗಳಿವೆ. ಕಾನೂನುಗಳನ್ನು ಗಾಳಿಗೆ ತೂರಿ, ಭೂ ಕಬಳಿಕೆಗೆ ಮುಂದಾಗಿದ್ದರೆ ಅದು ಬೋಗಸ್ ಆಗುತ್ತದೆ. ಕೂಡಲೇ ಮೇಲಾಧಿಕಾರಿಗಳು ಸರಕಾರಿ ಜಾಗವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಒತ್ತುವರಿ ಮಾಡಿದ್ದಾರೆಂದರೆ ಕೂಡಲೇ ಅವರೇನೆ ಆಗಿರಲಿ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಜರುಗಿಸದ ಪಕ್ಷದಲ್ಲಿ ಕಾನೂನಿನಡಿಯಲ್ಲಿ ನಿರ್ಭಯವಾಗಿ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥ ನಸ್ರುಲ್ಲಾ ಮಾತನಾಡಿ, ಯಾವುದೇ ರೈತ ಸರಕಾರಿ ಜಾಗದಲ್ಲಿದ್ದರೆ, ಭೂಮಿಯನ್ನು ಹದಗೊಳಿಸಿ, ಬೆಳೆ ಇಡಬೇಕು. ಇದೇ ಜಾಗದಲ್ಲಿ ಇದೇ ಊರಿನವರಾಗಿರಬೇಕು. ಒಂದೇ ಒಂದು ಕುಟುಂಬದಲ್ಲಿ 5-6 ಜನರಿಗೆ ಎಕರೆಗಳಷ್ಟು ಜಾಗವನ್ನು ಸರಕಾರ ಮಂಜೂರು ಮಾಡಿರುವುದು ಕಾನೂನು ಬಾಹಿರವಾಗಿದೆ. ಇಂತಹದ್ದು ಮೊದಲು ಅಧಿಕಾರಿಗಳು ನಿಲ್ಲಿಸಬೇಕು. ಗ್ರಾಮದ ಜಾಗ ಗ್ರಾಮಸ್ಥರಿಗೆ ಮೀಸಲಿಡಿ, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.*ಪಿಡಿಒಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು*: ೨೦೧೭ರಲ್ಲಿ ಮಂಜೂರಾಗಿರುವ ಸರಕಾರಿ ಜಾಗವನ್ನು ಬೇರೆಯವರಿಗೆ ಹೇಗೆ ಮಂಜೂರು ಮಾಡಿಕೊಡಲು ಸಾಧ್ಯ. ಇದರಲ್ಲಿ ನಿಮ್ಮ ಕೈವಾಡವೂ ಸಹ ಇರಬಹುದಲ್ಲವೇ, ಕೂಡಲೇ ಸರಕಾರಿ ಜಾಗವನ್ನು ಭೂ ಮಾಪಕ ಇಲಾಖೆಯಿಂದ ಸರ್ವೆ ಮಾಡಿಸಿ ಸರಕಾರಿ ಜಾಗಕ್ಕೆ ಕಾಂಪೌಂಡ್ ಮತ್ತು ನಾಮಫಲಕ ಅಳವಡಿಸಿ ಎಂದು ವೆಂಕಟಗಿರಿಕೋಟೆ ಪಿಡಿಒ ಬಸವನಗೌಡ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
Be the first to comment