ಜಿಲ್ಲಾ ಸುದ್ದಿಗಳು
ಕುಮಟಾ
ಹಿಂದೂ ಜಾಗರಣಾ ವೇದಿಕೆಯು ರಾಜ್ಯದಲ್ಲಿ ನಡೆಯುತ್ತಿರುವ ದೇವಾಲಯಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 27 .2021 ಕ್ಕೆ ಗಡುವು ನೀಡಿದೆ.ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕದ ವತಿಯಿಂದ ಉಪವಿಭಾಗದ ಕಛೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಅಶೋಕ್ ನಾಯ್ಕ್ ಮುಖಾಂತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡು ಈ ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು. ಹಾಗೂ ಸೋಮವಾರ ರಾಜ್ಯ ಸರ್ಕಾರಕ್ಕೆ ಅವರು ಮನವಿ ಸಲ್ಲಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಹಾಗೂ 2009 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಧಿಕ್ಕರಿಸಿ ರಾಜ್ಯದ ಅಧಿಕಾರ ಶಾಹಿಗಳು ನಂಜನಗೂಡು ತಾಲೂಕಿನ ಹುಚ್ಚಗಣಿಯ ದೇವಾಲಯಗಳನ್ನು ಕೆಡವಿದ್ದು, ಈಗಾಗಲೇ ಹಿಂದೂ ಸಮಾಜ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದೆ. ಅಲ್ಲದೆ ಹಿಂದೂ ಜಾಗರಣಾ ವೇದಿಕೆಯು ಮಹತ್ವದ ನಿರ್ಣಯ ಕೈಗೊಂಡು 10 ದಿನದ ಗಡುವನ್ನು ಸರ್ಕಾರಕ್ಕೆ ನೀಡಿದೆ.ಅದರಂತೆ ಹುಚ್ಚಗಣಿ ಗ್ರಾಮದ ಪುರಾತನ ದೇವಾಲಯಗಳನ್ನು ಕಾನೂನುಬಾಹಿರವಾಗಿ ಕೆಡವಲು ಕರಣರಾದ ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ನಂಜನಗೂಡು ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮವಾಗಬೇಕು. ಸರಕಾರಿ ಅಧಿಕಾರಿಗಳ ಈ ಕೃತ್ಯಕ್ಕಾಗಿ ರಾಜ್ಯ ಸರ್ಕಾರ ರಾಜ್ಯದ ಹಿಂದುಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು.
ಈ ಮಹಾಪರಾಧದ ಪ್ರಾಯಶ್ಚಿತ್ತಕ್ಕಾಗಿ ಕೆಡವಿದ ಮಂದಿರಗಳ ಪುನರ್ನಿರ್ಮಾಣ ಕಾರ್ಯವನ್ನು ಸರ್ಕಾರವೇ ಮಾಡಬೇಕು. ರಾಜ್ಯದ ಸಾರ್ವಜನಿಕ ಹಿಂದು ದೇವಾಲಯಗಳ ಶಾಶ್ವತ ಸುರಕ್ಷೆಗಾಗಿ ಸುಪ್ರೀಂಕೋರ್ಟಿನ ಆದೇಶದ ಅನ್ವಯವೇ ವಿಶೇಷ ಕಾನೂನನ್ನು ರಚಿಸಿ ತಕ್ಷಣವೇ ಜಾರಿಗೊಳಿಸಬೇಕು. ಅಲ್ಲದೇ ಅದೇ ರೀತಿ ದೇವಾಲಯಗಳ ತೆರವು ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲೆಯಲ್ಲೂ ನಡೆದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಆದ್ದರಿಂದ ನಮ್ಮ ಜಿಲ್ಲೆಯ ದೇವಸ್ಥಾನವನ್ನು ಧ್ವಂಸಗೊಳಿಸಲು ಸೂಚನೆಗಳು ಬಂದಿದ್ದಲ್ಲಿ ಅದನ್ನು ಕೂಡಲೇ ನಿಲ್ಲಿಸಬೇಕು. ಹಿಂಜಾವೇ ಆಗ್ರಹವನ್ನು ನಿರ್ಲಕ್ಷಿಸಿದಲ್ಲಿ ತೀವ್ರ ರೀತಿಯ ಜನಾಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂಧರ್ಭದಲ್ಲಿ ಪ್ರಾಂತ ಕಾರ್ಯದರ್ಶಿ ಭಾಸ್ಕರ ನಾಯ್ಕ, ಜಿಲ್ಲಾಧ್ಯಕ್ಷ ಸದಾನಂದ ಕಾಮತ, ಜಿಲ್ಲಾ ಖಜಾಂಚಿ ವಿವೇಕ ನಾಯಕ, ತಾಲೂಕಾಧ್ಯಕ್ಷ ಗಣೇಶ ಭಟ್ ಬಗ್ಗೋಣ, ಪ್ರಧಾನ ಕಾರ್ಯದರ್ಶಿ ಮಾಸ್ತಿ ಗೌಡ, ಚಂದು ನಾಯ್ಕ, ವೆಂಕಟೇಶ ಪ್ರಭು, ಹೇಮಂತ ಗಾಂವಕರ, ವಿನಯ ನಾಯ್ಕ ಸೇರಿದಂತೆ ಇತರರು ಇದ್ದರು.
Be the first to comment