ಜಿಲ್ಲಾ ಸುದ್ದಿಗಳು
ದೇವನಹಳ್ಳಿ
ಗ್ರಾಮಗಳ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಒಂದು ಗ್ರಾಮ ಎಂದಾಕ್ಷಣ ಮೂಲಭೂತ ಸೌಕರ್ಯಗಳು ಇರಲೇ ಬೇಕಲ್ಲವೇ, ಆದರೆ, ಇಲ್ಲೊಂದು ಗ್ರಾಮದಲ್ಲಿ ಎಲ್ಲಾ ಸೌಕರ್ಯಗಳು ಇದ್ದರು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ತಕರಾರು ಮಾತ್ರ ಬಗೆಹರಿಯದ ಸಮಸ್ಯೆಯಾಗಿ ಇಡೀ ಗ್ರಾಮವನ್ನು ಕಾಡುತ್ತಿದ್ದು, ಸುಮಾರು 120 ವರ್ಷಗಳಿಂದ ಓಡಾಡುವ ರಸ್ತೆಗೆ ಮುಕ್ತಿ ಯಾವಾಗ ಎಂಬುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.ಹೇಳಿಕೇಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಿಲ್ಲಾಡಳಿತ ಭವನ ಹೊಂದಿರುವ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಶೆಟ್ಟೇರಹಳ್ಳಿ ಗ್ರಾಮದಲ್ಲಿ ಬಗೆಹರಿಯದ ರಸ್ತೆ ಸಮಸ್ಯೆ ಇದಾಗಿದ್ದು, ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ, ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಕಂಡಿಲ್ಲ. ಈಗಿರುವ ರಸ್ತೆ ಸರ್ವೆ ನಂ.೩ರಲ್ಲಿರುವ ಓಬಳಪ್ಪ ಎಂಬುವವರ ಜಮೀನಿನಲ್ಲಿ ಸುಮಾರು 80 ವರ್ಷಗಳ ಹಿಂದೆ ಪೂರ್ವಿಕರು ಹೊಂದಾಣಿಕೆಯಲ್ಲಿ ಮಾಡಿಕೊಂಡಿರುವ ರಸ್ತೆಯಾಗಿದೆ.
ರಸ್ತೆ ಹೊರತುಪಡಿಸಿ ಉಳಿದೆಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಗ್ರಾಮದಲ್ಲಿ ಸರಕಾರಿ ಕಿರಿಯ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ, ಆಂಜನೇಯಸ್ವಾಮಿ ದೇಗುಲ, ಕುರುಬ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಸುಮಾರು 340 ಮತದಾರರನ್ನು ಒಳಗೊಂಡಂತೆ ಸುಮಾರು 600 ಜನಸಂಖ್ಯೆಯನ್ನು ಹೊಂದಿದೆ. ಪಕ್ಕದ ದೊರೆಕಾವಲು ಗ್ರಾಮದವರೂ ಸಹ ಇದೇ ಶೆಟ್ಟೇರಹಳ್ಳಿ ಗ್ರಾಮಕ್ಕೆ ಬಂದು ಮತದಾನದ ಹಕ್ಕನ್ನು ಚಲಾಯಿಸುತ್ತಾರೆ. ಆದರೆ ಸರ್ವೆ ನಂ.3/4ರ ಜಮೀನುಗಳ ಮಾಲೀಕರು ರಸ್ತೆಯು ಜಮೀನಿಗೆ ಸೇರಿರುವುದು ಎಂದು ರಸ್ತೆ ಬ್ಲಾಕ್ ಮಾಡಲು ಮುಂದಾಗುತ್ತಿದ್ದಾರೆಂದು ಗ್ರಾಮಸ್ಥರನ್ನು ನಿದ್ರೆ ಕೆಡಿಸುವಂತೆ ಮಾಡಿದೆ.
ಈ ರಸ್ತೆ ಪಕ್ಕದಲ್ಲಿರುವ ಧನದ ಓಣಿಯ ಕಾಲುವೆ ರಸ್ತೆಯಲ್ಲಿ ಆಗ ಜನರು ಓಡಾಡುತ್ತಿದ್ದರು ಎನ್ನಲಾಗುತ್ತಿದ್ದು, ಮಳೆ ಬಂತೆಂದರೆ, ಪಕ್ಕದ ಸಾವಕನಹಳ್ಳಿ, ಬೊಮ್ಮವಾರ ದಿನ್ನೆಯಿಂದ ಇದೇ ಜಾಗಕ್ಕೆ ನೀರು ಬೃಹತ್ ಮಟ್ಟದಲ್ಲಿ ಹರಿದು ಬರುತ್ತಿರುವುದು ಇಲ್ಲಿನ ಮತ್ತೊಂದು ಸಮಸ್ಯೆಯಾಗಿದೆ. ರಸ್ತೆಯು ಈ ಹಿಂದೆ ಡಾಂಬರೀಕರಣವೂ ಸಹ ಆಗಿತ್ತು. ಆದರೆ ಕಾಲ ಕಳೆದಂತೆ ಕಿತ್ತುಹೋಗಿ, ತೀರ ಹದಗೆಟ್ಟಿದೆ. ಅಧಿಕಾರಿಗಳು ಬಂದು ರಸ್ತೆ ಡಾಂಬರೀಕರಣಕ್ಕೆ ಮುಂದಾದರೆ ಖಾಸಗಿ ಮಾಲೀಕತ್ವ ಪಡೆದ ಮೂರನೇ ವ್ಯಕ್ತಿಗಳು ರಸ್ತೆ ಮಾಡಲು ಬಿಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
Be the first to comment