ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಕೊಯಿರ ಕಾಲೋನಿಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಆರೋಗ್ಯ ಇಲಾಖೆ ಮತ್ತು ಗ್ರಾಪಂ ವತಿಯಿಂದ ಚಾಲನೆ ನೀಡಲಾಯಿತು.ಕೊಯಿರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಚಂದ್ರಕಲಾ ಮಾತನಾಡಿ, ಗ್ರಾಪಂ ವ್ಯಾಪ್ತಿಯ ೧೧ ಹಳ್ಳಿಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಲಸಿಕೆಯನ್ನು ಹಾಕಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರಕಾರ ಉಚಿತ ಕೋವಿಡ್ ಲಸಿಕೆ ಪೂರೈಸುತ್ತಿದ್ದು, ಇದರ ಸದುಪಯೋಗವನ್ನು ಪ್ರತಿ ಗ್ರಾಮಸ್ಥರು ಪಡೆದುಕೊಳ್ಳುವಂತಾಗಬೇಕು. ಈಗಾಗಲೇ ಕೋವಿಡ್ ಬಂದಾಗಿನಿಂದಲೂ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ೪೦೦೦ಕ್ಕೂ ಹೆಚ್ಚು ಜನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಲಸಿಕೆ ಪಡೆಯದವರು ತಮ್ಮ ಮನೆಬಾಗಿಲಿಗೆ ಆರೋಗ್ಯ ಸಿಬ್ಬಂದಿ ಬರಲಿದ್ದು, ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕೊಯಿರ ಗ್ರಾಪಂ ಕಾರ್ಯದರ್ಶಿ ಆದೇಪ್ಪ ಮಾತನಾಡಿ, ಕೊರೊನಾ ಹೆಮ್ಮಾರಿ ಗ್ರಾಮೀಣ ಪ್ರದೇಶದಲ್ಲಿ ಕಾಲಿಡದಂತೆ ಎಲ್ಲರೂ ಜಾಗೃತರಾಗಬೇಕು. ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಂಡರೆ ಕೊರೊನಾ ರೋಗ ತಡೆಗಟ್ಟಲು ಸಹಕಾರಿಯಾಗುತ್ತದೆ. ಲಸಿಕೆ ಪಡೆದ ಮಾತ್ರಕ್ಕೆ ಕೋವಿಡ್ ಬರುವುದಿಲ್ಲ ಎಂಬ ಭಾವನೆಯಲ್ಲಿ ಎಚ್ಚರ ತಪ್ಪಬಾರದು, ಕೊರೊನಾ ಮುಂಜಾಗೃತ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಮಾಜಿಕ ಅಂತರ ಇರಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಗ್ರಾಪಂ ಪ್ರಭಾರ ಪಿಡಿಒ ಪದ್ಮಮ್ಮ, ಗ್ರಾಪಂ ಸಿಬ್ಬಂದಿಗಳಾದ ಬೈರೇಗೌಡ, ಮುನೇಗೌಡ, ಮುನಿರಾಜು, ಆಕಾಶ್ ಆಸ್ಪತ್ರೆಯ ಸಿಬ್ಬಂದಿ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು, ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
Be the first to comment