ರಾಜ್ಯ ಸುದ್ದಿಗಳು
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಕಾರ್ಯಕ್ರಮ
ದೇವನಹಳ್ಳಿ
ದೇಶದ ಬೆನ್ನಲುಬಾದ ರೈತರು, ದೇಶ ಕಾಯುವ ಯೋಧರಿಗೆ ಗೌರವ ಸಮರ್ಪಣೆ ಮಾಡುವ ಸುದಿನ ನಮಗೆ ದೊರೆತಿರುವುದು ಪುಣ್ಯವಾಗಿದೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು.ತಾಲೂಕಿನ ಚಪ್ಪರಕಲ್ಲು ಬಳಿಯ ದ್ರಾಕ್ಷಿ ತೋಟದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಗೋ-ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ರೈತರಿಗೆ ಹಲವಾರು ರೀತಿಯಲ್ಲಿ ಹಲವು ಯೋಜನೆಗಳನ್ನು ತಂದಿದೆ. ರೈತರಿಗೆ ಮಾಹಿತಿ ಕೊರತೆಯಿಂದಾಗಿ ಸರಿಯಾಗಿ ಸೌಲಭ್ಯ ದೊರೆಯುತ್ತಿಲ್ಲ. ರೈತರು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ತಿಳಿದುಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ದಕ್ಷ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದೆ. ಅವರ ಜನ್ಮದಿನದ ಅಂಗವಾಗಿ ನಮ್ಮ ಭಾಗದ ಕೆಲ ರೈತರು ಮತ್ತು ಯೋಧರನ್ನು ಗುರ್ತಿಸಿ ಗೌರವ ನೀಡುವ ಕೆಲಸವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಮೋದಿ ಅವರ ಜನ್ಮದಿನದ ಪ್ರಯುಕ್ತ ಸೆ.೧೭ ರಿಂದ ಅ.೭ರವರೆಗೆ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸೇವೆ ಮತ್ತು ಸಮರ್ಪಣೆ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಎಲ್ಲಾ ಮಂಡಲ ಸದಸ್ಯರನ್ನು ಒಳಗೊಂಡು ಸಸಿನೆಡುವ ಕಾರ್ಯಕ್ರಮ, ಪ್ಲಾಸ್ಟಿಕ್ ಮುಕ್ತ ಪರಿಸರ ಕಾರ್ಯಕ್ರಮ, ರೈತರಿಂದ ಅಭಿನಂದನಾ ಪತ್ರಗಳನ್ನು ಪಡೆದು ಪ್ರಧಾನಿಯವರಿಗೆ ಕಳುಹಿಸಿಕೊಡುವುದು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಜಿಲ್ಲಾ ರೈತ ಮೋರ್ಚಾ ಮತ್ತು ತಾಲೂಕು ಬಿಜೆಪಿ ವತಿಯಿಂದ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸೇವಾ ಕಾರ್ಯಕ್ರಮಗಳ ಮೂಲಕ ಅಭಿನಂದಿಸಲಾಗುತ್ತಿದೆ ಎಂದರು.
ತಾಲೂಕು ರೈತಮೋರ್ಚಾ ಉಪಾಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಪಕ್ಷದ ಬಲವರ್ಧನೆಗೆ ಪ್ರತಿ ಯುವಕರು ಮುಂದಾಗಬೇಕು. ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಅದನ್ನು ಗ್ರಾಮದ ಪ್ರತಿ ಮನೆಮನೆಗೆ ತಲುಪಿಸುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರೆಯುವ ಕೆಲಸವನ್ನು ಈ ಭಾಗದ ಮುಖಂಡರು ಮಾಡುತ್ತಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸನ್ಮಾನಿತ ರೈತರುಗಳಾದ ತಮ್ಮೇಗೌಡ, ಶ್ರೀನಿವಾಸ್ (ಬಾಬು), ಆನಂದ್‌ಗೌಡ, ಲೋಕೇಶ್, ಕುಮಾರ್ ಮತ್ತು ನಿವೃತ್ತ ಸೈನಿಕ ಯೋಧ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ರಾಜ್ಯ ಬಿಜೆಪಿ ಮುಖಂಡ ನಾರಾಯಣಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್‌ಬಾಬು, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ಆವತಿ ಶಕ್ತಿಕೇಂದ್ರದ ಅಧ್ಯಕ್ಷ ತಮ್ಮಯ್ಯ, ತಾಲೂಕು ಉಪಾಧ್ಯಕ್ಷ ನಾಗೇಶ್, ಕುಂದಾಣ ಹೋಬಳಿ ಅಧ್ಯಕ್ಷ ವೆಂಕಟೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಮುನೀಂದ್ರ, ಭೂ ಮಂಜೂರಾತಿ ಕಮಿಟಿ ಸದಸ್ಯ ರಮೇಶ್, ಮಹಿಳಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
Be the first to comment