ರಾಜ್ಯ ಸುದ್ದಿಗಳು
ದೇವನಹಳ್ಳಿ
ಸರಕಾರದ ಆದೇಶದ ಮೇರೆಗೆ ೬ ರಿಂದ ೯ನೇ ತರಗತಿ ಮಕ್ಕಳಿಗೆ ಶೈಕ್ಷಣಿಕ ಶಾಲಾರಂಭಕ್ಕೆ ಹಸಿರು ನಿಶಾನೆ ದೊರೆತಿರುವುದು ಗ್ರಾಮೀಣ ಭಾಗದ ಮಕ್ಕಳಿಗೆ ಖುಷಿ ತಂದುಕೊಟ್ಟಿದೆ ಎಂದು ವಿಹಾನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರತಾಪ್‌ಯಾದವ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಸರ್ಕಲ್ ಬಳಿಯ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಶಾಲಾಡಳಿತ ಮಂಡಳಿ ವತಿಯಿಂದ ಮಕ್ಕಳ ಶೈಕ್ಷಣಿಕ ಪ್ರಾರಂಭಕ್ಕೆ ವಿಭಿನ್ನ ರೀತಿಯಲ್ಲಿ ಬರಮಾಡಿಕೊಂಡು ಅವರು ಮಾತನಾಡಿದರು. ಕೊರೊನಾದಿಂದ ಶಾಲೆಗಳು ಮುಚ್ಚಿದ್ದವು. ಒಂದೂವರೆ ವರ್ಷದ ನಂತರ ಇದೀಗ ಶಾಲೆ ಆರಂಭವಾಗುತ್ತಿದೆ. ಇದನ್ನು ಒಂದು ಹಬ್ಬದ ವಾತಾವರಣ ಸೃಷ್ಠಿ ಮಾಡುವ ಸಲುವಾಗಿ ಹಬ್ಬದ ರೀತಿಯಲ್ಲಿಮಕ್ಕಳನ್ನುಶಾಲೆಗೆಬರಮಾಡಿಕೊಳ್ಳಲಾಗಿದೆ.
ಈಗಾಗಲೇ ಶಾಲಾ ಶಿಕ್ಷಕ ಸಿಬ್ಬಂದಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ಮಾಡಿಸಲಾಗಿದ್ದು, ಸರಕಾರದ ಆದೇಶದಂತೆ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಶಾಲೆಯನ್ನು ತೆರೆಯಲಾಗಿದೆ. ಶಾಲಾ ಕ್ಯಾಂಪಸ್‌ನಲ್ಲಿ ಸ್ಯಾನಿಟೈಸರ್ ಮಷಿನ್, ದೇಹ ಉಷ್ಣಾಂಶ ತಪಾಸಣೆ ಮಾಡಿಸಿ ಮಕ್ಕಳನ್ನು ಶಾಲೆಯ ಆವರಣಕ್ಕೆ ಬರುತ್ತಿದ್ದಾರೆ. ಶೇ.೧೦೦ರಷ್ಟು ಮಕ್ಕಳು ಹಾಜರಾತಿ ಇರುವುದು ಮತ್ತಷ್ಟು ಸಂತಸ ತಂದಿದೆ. ಕ್ಯಾಂಪಸ್ ಅನ್ನು ಈಗಾಗಲೇ ಸ್ಯಾನಿಟೈಸರ್ ಮಾಡಲಾಗಿದ್ದು, ಶಾಲಾ ಗೇಟ್‌ನಲ್ಲಿ ಕೋವಿಡ್ ನಿಯಮ ಪಾಲನೆಯ ವಸ್ತುನಿಷ್ಠ ಪೋಸ್ಟರ್ ಹಾಕಲಾಗಿದೆ.
ಪೋಷಕರು ಯಾವುದೇ ಆತಂಕವಿಲ್ಲದೆ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡಬಹುದು. ಒಂದೂವರೆ ವರ್ಷದಿಂದ ಆನ್‌ಲೈನ್ ತರಗತಿಗಳಿಂದ ಮಕ್ಕಳು ಮತ್ತು ಶಿಕ್ಷಕರ ಮಧ್ಯೆ ಇದ್ದ ಸ್ನೇಹ ಬಾಂದವ್ಯ ದೂರ ಉಳಿದಿತ್ತು. ಇದೀಗ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಶಾಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಿದ್ದಾರೆ. ಈಗಾಗಲೇ ಮಕ್ಕಳಿಗೆ ಕೋವಿಡ್ ಹರಡುವ ಮತ್ತು ಕೋವಿಡ್ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ಮಿಕ್ಕಿಮೌಸ್ ಹಾಗೂ ಡೋನಾಲ್ಡ್ ಡಕ್ ವೇಷಭೂಷಣದೊಂದಿಗೆ ಮಕ್ಕಳನ್ನು ಹೂ, ಗ್ರೀಟಿಂಗ್ ಮತ್ತು ಸ್ಯಾನಿಟೈಸರ್ ಕಿಟ್ ನೀಡುವುದರ ಮೂಲಕ ಸ್ವಾಗತಿಸಲಾಯಿತು.
ವಿದ್ಯಾರ್ಥಿಗಳ ಅಭಿಪ್ರಾಯ: ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ಬರದೆ, ಸ್ನೇಹಿತರನ್ನು ಸಂಪರ್ಕಿಸದೆ, ಬಹಳಷ್ಟು ವಿದ್ಯಾರ್ಥಿಗಳು ನನ್ನಂತೆಯೇ ನೊಂದಿದ್ದರು. ಮನೆಯಲ್ಲಿದ್ದುಕೊಂಡು ಸಾಕಷ್ಟು ಬೋರ್ ಆಗುತ್ತಿತ್ತು. ಕಾಲವೇ ಕಳೆಯುತ್ತಿರಲಿಲ್ಲ. ಏನೂ ಓದಲೂ ಸಹ ಆಗುತ್ತಿರಲಿಲ್ಲ. ಮೈಂಡ್ ಫುಲ್ ಟ್ರೆಸ್ ಆಗುತ್ತಿತ್ತು. ಇದೀಗ ಶಾಲೆ ಆರಂಭಗೊಂಡಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ವೇಳೆಯಲ್ಲಿ ವಿಹಾನ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಇದ್ದರು.
Be the first to comment