ಹೇಬಳೆ: ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ…!!!

ವರದಿ: ಕುಮಾರ ನಾಯ್ಕ, ಭಟ್ಕಳ

ಜಿಲ್ಲಾ ಸುದ್ದಿಗಳು

ಭಟ್ಕಳ:

CHETAN KENDULI

ತಾಲೂಕಿನ ಹೆಬಳೆ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯದೇ ಉಳಿದಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪಂಚಾಯತ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಹೆಬಳೆ ಪಂಚಾಯತ ಹನೀಫಾಬಾದ್, ರೆಹಮತ್ ಆಬಾದ್, ಮಾಸ್ಟರ್ ಕಾಲೋನಿ, ತಲ್ಲಾ ಕಾಲೋನಿ, ಸರಗಂಟೆ ದೇವಸ್ಥಾನ ರಸ್ತೆ, ಮೀನಾ ರೋಡ್ ಸುತ್ತಮುತ್ತ ಕಸ, ತ್ಯಾಜ್ಯಗಳು ತುಂಬಿಕೊಂಡಿದ್ದು, ದುರ್ವಾಸನೆ ಹರಡಿದೆ. ಎಲ್ಲೆಡೆ ತ್ಯಾಜ್ಯಗಳು ಬಿದ್ದುಕೊಂಡಿರುವುದರಿಂದ ರೋಗರುಜಿನಗಳ ಭಯ ಜನರನ್ನು ಆವರಿಸಿಕೊಂಡಿದೆ. ಕಸ, ತ್ಯಾಜ್ಯಗಳ ಮೇಲೆ ನಾಯಿ, ಹಂದಿಗಳು ಮುತ್ತಿಕೊಳ್ಳುತ್ತಿದ್ದು, ಇವುಗಳ ಓಡಾಟದಿಂದ ಅಪಘಾತಗಳು ಹೆಚ್ಚುತ್ತಿವೆ. ಹನೀಫಾಬಾದ್ ಭಾಗದಲ್ಲಿನ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ವಿಮೆನ್ ಸೆಂಟರ್‌ನಿಂದ ವಾಹನವನ್ನು ಒದಗಿಸಲಾಗಿದ್ದರೂ, ವಿಲೇವಾರಿ ಕಾರ್ಯ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಪತಿ ದಿನ ಕಸ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು.

ದಿನ ಬಿಟ್ಟು ದಿನ ಪ್ರತಿ ಮನೆಯ ಕಸ ತ್ಯಾಜ್ಯ ಸಂಗ್ರಹಕ್ಕೆ ಗೂಡ್ಸ್ ರಿಕ್ಷಾವನ್ನು ಬಳಸಿಕೊಳ್ಳಬೇಕು, ಕಸ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ನಿವೇಶನವನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ಒಂದು ವಾರದಲ್ಲಿ ಕಸ, ತ್ಯಾಜ್ಯ ವಿಲೇವಾರಿಗೆ ಮುಂದಾಗದೇ ಇದ್ದಲ್ಲಿ ಗ್ರಾಮಸ್ಥರನ್ನು ಒಟ್ಟುಗೂಡಿಸಿಕೊಂಡು ಸಹಾಯಕ ಆಯುಕ್ತರ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪಂಚಾಯತ ಅಧ್ಯಕ್ಷೆ ಕುಪ್ಪು ಗೊಂಡ ಹಾಗೂ ಪಿಡಿಓ ಜಯಂತಿ ನಾಯ್ಕ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೈಯದ್ ಅಲಿ, ಉಪೇಂದ್ರ ಮೊಗೇರ, ನಿಸಾರ್ ಅಹ್ಮದ್, ಶಬೀರ್ ಕುಂದನಗುಡ, ಸಲೀಮ್ ಕೋಲಾ, ಶಮ್‌ವೀಲ್, ಮೊಗೈರಾ ಎಮ್.ಜಿ. ಉಮೈರ್ ರುಕ್ಕುದ್ದೀನ್, ನೂರ್ ಆರ್ಘಾತ ಮೊದಲಾದವರು ಉಪಸ್ಥಿತರಿದ್ದರು.


ವಾಗ್ವಾದಕ್ಕೆ ತಿರುಗಿದ ಪ್ರತಿಭಟನೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷರು, ಪಂಚಾಯತ ಸದಸ್ಯರೂ ಆಗಿರುವ ಸುಬ್ರಾಯ ದೇವಾಡಿಗ ಆಡಿದ ಮಾತೊಂದು ಕೆಲ ಕಾಲ ಕೋಲಾಹಲವನ್ನು ಸೃಷ್ಟಿಸಿತು. ಪಂಚಾಯತ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೆಲವರು ವಾಸಿಸಿದ್ದು, ಅವರೇ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅವರಿಂದಲೇ ಸಮಸ್ಯೆ ಸೃಷ್ಟಿಯಾಗಿದೆ ಎನ್ನುತ್ತಿದ್ದಂತೆಯೇ ಪ್ರತಿಭಟನಾಕಾರರು ತಿರುಗಿಬಿದ್ದರು. ನೀವು ಆಡಿದ ಮಾತು, ಸರಿ, ಅಲ್ಲ. ನಿಮಗೆ ನಾವು ಮನವಿ ನೀಡುವುದಕ್ಕೆ ಬಂದಿಲ್ಲ. ನಿಮಗೆ ಅಂತಹ ಮಾತನ್ನು ಆಡುವ ಅಧಿಕಾರವೇ ಇಲ್ಲ ಎಂದು ತಿರುಗೇಟು ನೀಡಿದರು. ಕೂಡಲೇ ಆಡಿದ ಮಾತನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಬ್ರಾಯ ದೇವಡಿಗ, ನಾನು ನನ್ನ ಅಭಿಪ್ರಾಯವನ್ನು ಪಿಡಿಓಗೆ ಹೇಳಿದ್ದೇನೆ. ಅವರ ಹತ್ತಿರ ಮಾತನಾಡುವ ಹಕ್ಕು ನನಗೆ ಇದೆ, ಗೌಜಿ ಗದ್ದಲದಿಂದ ಯಾವುದೇ ಪರಿಹಾರ ಇಲ್ಲ ಎಂದು ಪ್ರತ್ಯುತ್ತರ ನೀಡಿದರು. ಕೆಲ ಬಿಜೆಪಿ ಪರ ಪಂಚಾಯತ ಸದಸ್ಯರು ಸುಬ್ರಾಯ ದೇವಡಿಗ ಬೆಂಬಲಕ್ಕೆ ನಿಂತರು. ವಾದ, ಪ್ರತಿವಾದದಿಂದಾಗಿ ಪಂಚಾಯತ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಪೊಲೀಸರು ಆಕ್ರೋಶಿತರನ್ನು ಚದುರಿಸಿದರು. ಕಸ, ತ್ಯಾಜ್ಯ ವಿಲೇವಾರಿಗೆ ಒಂದು ವಾರದ ಗಡುವು ನೀಡಿ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

Be the first to comment

Leave a Reply

Your email address will not be published.


*