ರಾಜ್ಯ ಸುದ್ದಿಗಳು
ದೇವನಹಳ್ಳಿ
ಮೋದಿ ಸರಕಾರ ಬಂದಾಗಿನಿಂದಲೂ ಜನರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟ ಸೃಷ್ಠಿಯಾಗುತ್ತಿದೆ. ಅಗತ್ಯ ವಸ್ತುಗಳ ಮೇಲೆ ಬೆಲೆ ಹೆಚ್ಚಿಸಿ ಜನರ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ ಗುಡುಗಿದರು.ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ದೇವನಹಳ್ಳಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಮೊದಲು ನೋಟ್ ಬ್ಯಾನ್ ಮಾಡಲಾಗಿತ್ತು. ಇದರಿಂದ ಸಾಕಷ್ಟು ಮಹಿಳೆಯರು ಮನೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಬ್ಯಾಂಕುಗಳಿಗೆ ಹಾಕುವಂತೆ ಆಯಿತು.
ಇದರಿಂದ ಕೌಟುಂಬಿಕ ವ್ಯವಹಾರದಲ್ಲಿ ಅಡೆತಡೆ ಉಂಟಾಗಿತ್ತು. ಕೇಂದ್ರ ಸರಕಾರ ಗೃಹೋಪಯೋಗಿ ವಸ್ತುಗಳು, ದಿನಬಳಕೆ ವಸ್ತುಗಳು ಸೇರಿದಂತೆ ತೈಲಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ದಿನೇ ದಿನೇ ಗ್ಯಾಸ್ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಬೆಲೆಯೂ ಸಹ ಹೆಚ್ಚಾಗಿರುವುದರಿಂದ ಬಡವರು ಬದುಕು ನಡೆಸಲು ಕಷ್ಟವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ವಸ್ತುವಿನ ಬೆಲೆ ಹೆಚ್ಚಳ ಮಾಡುವುದಕ್ಕಿಂತ ಮುಂಚೆ ಬಡವರಿಗಾಗಿ, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡಬೇಕು. ಕೇವಲ ಬಡವರ ತೆರಿಗೆ ಹಣದಲ್ಲಿ ಲೂಟಿ ಮಾಡುವ ಸರಕಾರ ಕೇಂದ್ರ ಮತ್ತು ರಾಜ್ಯಸರಕಾರಗಳಾಗಿವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತೀವ್ರ ಸಂಕಷ್ಟದ ನಡುವೆ ಸಾಮಾನ್ಯ ಜನರ ಬದುಕು ಸಾಗಿಸುವುದು ಕಷ್ಟವಾಗಿದೆ.
೧೦ಸಾವಿರ ಸಂಬಳ ತೆಗೆದುಕೊಳ್ಳುವವರ ಪರಿಸ್ಥಿತಿ ೧ ಸಾವಿರ ರೂ. ಗ್ಯಾಸ್‌ಗೆ ನೀಡಿದರೆ, ಮನೆ ಬಾಡಿಗೆ, ಪೆಟ್ರೋಲ್, ಇಎಂಐ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುವುದಾದರೂ ಹೇಗೆ ಎಂಬುವುದರ ಬಗ್ಗೆ ತಿಳುವಳಿಕೆ ಇಲ್ಲದೆ ಏಕಾಏಕೀ ಬೆಲೆ ಏರಿಸುವುದು ಎಷ್ಟರ ಮಟ್ಟಿಗೆ ಸರಿ, ಮುಂದಿನ ಚುನಾವಣೆಯಲ್ಲಿ ಇಂತಹ ಸರಕಾರವನ್ನು ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಜಿಪಂ ಮಾಜಿ ಸದಸ್ಯೆ ರಾಧಮ್ಮ ಮುನಿರಾಜ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಪುಷ್ಪ, ಆಲೂರುದುದ್ದನಹಳ್ಳಿ ಗ್ರಾಪಂ ಸದಸ್ಯೆ ಮೀನಾಕುಮಾರಿ, ಇತರರು ಇದ್ದರು.
Be the first to comment