ರಾಜ್ಯ ಸುದ್ದಿಗಳು
ದೇವನಹಳ್ಳಿ
ತಳಮಟ್ಟದ ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸುವ ಹಳ್ಳಿಗರಿಗೆ ಸಮೀಪದಲ್ಲಿ ಸಿಗುವಂತಹ ಸರಕಾರವೇ ಗ್ರಾಪಂ ಎಂದು ಗ್ರಾಮ ಸಭೆ ನೋಡಲ್ ಅಧಿಕಾರಿ ಎಸ್.ಭೋಜಣ್ಣ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಸಿಂಗ್ರಹಳ್ಳಿ ಗ್ರಾಮದಲ್ಲಿ 2021-22ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆ, ರಾಷ್ಟ್ರೀಯ ನರೇಗಾ ಮತ್ತು ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ಏನೇ ಸರಕಾರದ ಸೌಲಭ್ಯ ಹಳ್ಳಿಗಳಲ್ಲಿನ ಜನರು ಪಡೆದುಕೊಳ್ಳಲು ಗ್ರಾಪಂಯಿಂದ ಪಡೆದುಕೊಳ್ಳಬಹುದಾಗಿದೆ.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕನಾಗಿರುವುದರಿಂದ ದೇವನಹಳ್ಳಿ ಕಚೇರಿಯಲ್ಲಿ ರೇಷ್ಮೆ ಬೆಳೆಗೆ ಸಂಬಂಧಿಸಿದಂತೆ ಸರಕಾರದ ಯೋಜನೆಗಳನ್ನು ಈ ಭಾಗದ ರೈತರು ಸದುಪಯೋಗ ಪಡೆದುಕೊಳ್ಳಬಹುದು. ಈ ಭಾಗದಲ್ಲಿ ರೇಷ್ಮೆ ಚಟುವಟಿಕೆ ಇಲ್ಲ. ಜಾಲಿಗೆ ಗ್ರಾಪಂ ವ್ಯಾಪ್ತಿಗೆ 18 ಹಳ್ಳಿಗಳು ಬರಲಿದ್ದು, ಈ ಹಳ್ಳಿಗಳಲ್ಲಿನ ಸಣ್ಣ ರೈತರು ರೇಷ್ಮೆ ಬೆಳೆಯಲ್ಲಿ ಸರಕಾರದಿಂದ ದೊರೆಯುವ ಸಹಾಯಧನ ಮತ್ತು ನರೇಗಾ ಯೋಜನೆಯಲ್ಲಿ ಸಾಕಷ್ಟು ಸಹಾಯಧನದ ಅವಕಾಶವನ್ನು ಪಡೆಯಬಹುದು. ರೇಷ್ಮೆ ಗೂಡು 1 ಕೆಜಿಗೆ 450ರೂ. ಧಾರಣೆ ಇದೆ. ರೇಷ್ಮೆ ಬೆಳೆ ಇಡುವ ರೈತರಿಗೆ ಸಾಕಷ್ಟು ಲಾಭ ಸಿಗಲಿದೆ. ನರೇಗಾ ಕಾಮಗಾರಿಯಲ್ಲಿ ಸಾಕಷ್ವಟು ಅವಕಾಶವಿದೆ. 3 ವರ್ಷದಲ್ಲಿ 2 ಲಕ್ಷದಷ್ಟು ಸೌಲಭ್ಯ ಸಿಗಲಿದೆ. ರೇಷ್ಮೆ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿಯೂ ಸಹ ಈ ಸೌಲಭ್ಯವಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2021-22ನೇ ಸಾಲಿನ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗಳನ್ನು ತಯಾರಿಸಿರುವುದು, ನರೇಗಾ ಯೋಜನೆ ಕ್ರಿಯಾಯೋಜನೆ ಮತ್ತು ಕಾಮಗಾರಿಗಳ ಅನುಷ್ಠಾನ, ತ್ಯಾಜ್ಯ ಮುಕ್ತ ಕಡೆ ನಮ್ಮ ಗ್ರಾಮ ಕಾರ್ಯಕ್ರಮ, ಸ್ವಚ್ಛಭಾರತ್ ಮಿಷನ್ ಮತ್ತು ನೈರ್ಮಲೀಕರಣದ ಬಗ್ಗೆ ಚರ್ಚಿಲಾಗಿದೆ. ಜಾಲಿಗೆ ಗ್ರಾಪಂನ ಮೊದಲ ಹಂತದ ಸಭೆಯನ್ನು ನಡೆಸಲಾಗುತ್ತಿದ್ದು, ಗ್ರಾಮೀಣ ಜನರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಅರ್ಜಿಯನ್ನು ನೀಡಿರುತ್ತಾರೆ ಅದನ್ನು ಪರಿಶೀಲಿಸಿ ಪರಿಹರಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಈಗಾಗಲೇ ವಾರ್ಡ್ ಸಭೆಗಳನ್ನು ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ತಿಂಡ್ಲು ಪಶು ಇಲಾಖೆಯ ವೈದ್ಯೆ ಡಾ.ರೇಷ್ಮ ಮಾತನಾಡಿ, ಪಶು ಇಲಾಖೆಯಲ್ಲಿ ಪ್ರಸ್ತುತ ಕೃತ ಗರ್ಭದಾರಣೆ, ಲಿಂಗ ನಿರ್ಧಾರಿತಕ್ಕೆ ಸಹಾಯಧನ, ೬ ತಿಂಗಳಿಗೊಮ್ಮೆ ಕಾಲುಬಾಯಿ ರೋಗ ತಪಾಸಣೆ, ಪಶು ಭಾಗ್ಯ ಯೋಜನೆಯಡಿ ನರೇಗಾದಲ್ಲಿ ಹಸು, ಕುರಿ, ಮೇಕೆ ಶೆಡ್‌ಗಳಿಗೆ ಸಹಾಯಧನ ನೀಡಲಾಗುತ್ತದೆ. ಇಲಾಖೆಗೆ ಅರ್ಜಿ ಹಾಕಿಕೊಂಡು ಸೌಲಭ್ಯ ಪಡೆಯಬಹುದು ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸರಕಾರಿ ವಿವಿಧ ಇಲಾಖೆಯಗಳ ಅಧಿಕಾರಿಗಳು, ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಮಂಡಿಸಿದರು.
*ಅಧಿಕಾರಿಗಳ ಮತ್ತು ಗಣ್ಯರ ಗೈರು*
ಆಹ್ವಾನ ಪತ್ರಿಕೆಯಲ್ಲಿ ಆಹ್ವಾನಿತರಾಗಿರುವ ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜು, ಸಂಸದ ಬಿ.ಎನ್.ಬಚ್ಚೇಗೌಡ, ಎಲ್.ಎನ್.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ರವಿ, ಕಪುಟ್ಟಣ್ಣ, ಅ.ದೇವೇಗೌಡ, ಸಿಇಒ ಎಂ.ಆರ್.ರವಿಕುಮಾರ್, ಜಿಪಂ ಆಡಳಿತಾಧಿಕಾರಿ ಪಿ.ಹೇಮಲತ, ತಾಪಂ ಆಡಳಿತಾಧಿಕಾರಿ ರಮೇಶ್‌ರೆಡ್ಡಿ, ಇಒ ಎಚ್.ಡಿ.ವಸಂತ್‌ಕುಮಾರ್, ತಹಶೀಲ್ದಾರ್ ಅನಿಲ್‌ಕುಮಾರ್, ಎಇಇ ಕೃಷ್ಣಪ್ಪ, ತಾಪಂ ಸಹಾಯಕ ನಿರ್ದೇಶಕ ಎಲ್.ಸುನೀಲ್ ಸೇರಿದಂತೆ ಅಧಿಕಾರಿ ಮತ್ತು ಗಣ್ಯರ ಗೈರುಹಾಜರು ಎದ್ದುಕಾಣುತ್ತಿತ್ತು.
ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಚ್.ಬಾಲಸುಬ್ರಮಣ್ಯ, ಸದಸ್ಯರು, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಎಇಇ ಎನ್.ಸೋಮಶೇಖರ್, ಜಾಲಿಗೆ ಗ್ರಾಪಂ ಪಿಡಿಒ ಎಂ.ಉಷಾ, ಕಾರ್ಯದರ್ಶಿ ನರಸಿಂಹಮೂರ್ತಿ, ಸಿಬ್ಬಂದಿ ಮತ್ತಿತರರು ಇದ್ದರು.
Be the first to comment