ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕುಂದಾಣ-ತಿಂಡ್ಲು ರಸ್ತೆ ಅಗಲೀಕರಣ ಕಾಮಗಾರಿ ವಾರದ ಹಿಂದೆ ಪ್ರಾರಂಭಿಸಿದ್ದು, ಇದುವರೆಗೂ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಪಿಡಬ್ಲ್ಯುಡಿ ಇಲಾಖೆಯಿಂದ ಸುಮಾರು ೧೩.೬ಕಿ.ಮೀ.ನಷ್ಟು ರಸ್ತೆಯ ಅಗಲೀಕರಣವಾಗುತ್ತಿದ್ದು, ಕಳೆದ ಮೂರ್‍ನಾಲ್ಕು ತಿಂಗಳಿನಿಂದ ರಸ್ತೆ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿಯಲಾಗಿತ್ತು. ಇದಾದ ಬಳಿಕ ರಸ್ತೆಯ ಕೆಲ ಜಾಗಗಳಲ್ಲಿ ಗುಂಡಿ ತೋಡಿ, ಕಾಂಕ್ರೀಟ್ ಬೆಡ್ ಬಿಡ್ಜ್ ಕಾಮಗಾರಿ ನಡೆಸಲಾಗಿತ್ತು. ತದನಂತರ ಕೊರೊನಾ ಲಾಕ್‌ಡೌನ್ ನಂತಹ ಕಾರಣಗಳಿಂದ ರಸ್ತೆಯ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ರಸ್ತೆಯ ಅಕ್ಕಪಕ್ಕದಲ್ಲಿ ಆಳುದ್ದ ಗುಂಡಿಗಳು ಇದ್ದು, ಮಳೆಗಾಲದಲ್ಲಿ ಸ್ವಲ್ಪ ಯಾಮಾರಿದರೂ ಯಮನ ಪಾದಕ್ಕೆ ಸೇರುವುದು ಖಚಿತ.
ನೆನ್ನೆಯಷ್ಟೇ ಮಹಿಳೆಯೊಬ್ಬರು ದ್ವಿಚಕ್ರವಾಹನದಲ್ಲಿ ರಸ್ತೆಯಲ್ಲಿ ಆಯಾತಪ್ಪಿ ಸಾವನ್ನಪ್ಪಿದ್ದಾಳೆ. ಹೀಗೆ ಹಲವಾರು ವಾಹನ ಸವಾರರು ಎದ್ದುಬಿದ್ದು, ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಚುರುಕುಗೊಳಿಸಿ ರಸ್ತೆಯಲ್ಲಿ ಸುಗಮ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಾಹನ ಸವಾರರ ಒತ್ತಾಯವಾಗಿದೆ.
ಒಂದು ವಾರದ ಹಿಂದೆಯಷ್ಟೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೂಡಲೇ ರಸ್ತೆ ಕಾಮಗಾರಿಯನ್ನು ಬೇಗ ಮುಗಿಸುವಂತೆ ಸೂಚಿಸಲಾಗುತ್ತದೆ ಎಂದು ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಅಧಿಕಾರಿ ಕೃಷ್ಣಪ್ಪ ಹೇಳುತ್ತಿದ್ದಾರೆ.
ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ವಿ.ಸ್ವಾಮಿ ಮಾತನಾಡಿ, ರಸ್ತೆ ಅಗಲೀಕರಣ ಎಂದು ಇದುವರೆಗೆ ರಸ್ತೆ ಅಗಲೀಕರಣವೇನೋ ಆಗಿದೆ. ಆದರೆ, ಬಿದ್ದಿರುವ ಗುಂಡಿಗಳನ್ನು ಮುಚ್ಚದೆ, ಕಾಮಗಾರಿಯನ್ನು ಚುರುಕುಗೊಳಿಸದೆ, ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಬೇಕು. ರಸ್ತೆಯನ್ನು ಶೀಘ್ರ ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Be the first to comment