ನೆರೆಹಾವಳಿಯಿಂದ ಹಾನಿಗೆ ಒಳಗಾದ ಮನೆಗಳನ್ನು ಸರಿಯಾಗಿ ಸರ್ವೇ ಮಾಡಲು ಶಾಸಕ ಸುನೀಲ್ ನಾಯ್ಕ ಸೂಚನೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ನೆರೆಯಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಹಾನಿಗೊಳಗಾದ ಮನೆಗಳನ್ನು ಸರಿಯಾಗಿ ಸರ್ವೆ ಮಾಡಿ ಮಾನವೀಯತೆಯಿಂದ ಜನರಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು ಎಂದು ಶಾಸಕ ಸುನೀಲ ನಾಯ್ಕ ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು.ಅವರು ಸೋಮವಾರ ಹೊನ್ನಾವರ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಾ. ನೆರೆ ಬಂದಾಗ ಕಂದಾಯ ಅಧಿಕಾರಿಗಳು ಸರಿಯಾಗಿ ಸರ್ವೆ ನಡೆಸುವುದಿಲ್ಲ. ನೋಡಲ ಅಧಿಕಾರಿಗಳು ನೆರೆ ಉಂಟಾಗುವ ಸ್ಥಳಗಳಲ್ಲಿ ಇರುವುದಿಲ್ಲ. ಅಂತವರ ಮೇಲೆ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ ನಾಗರಾಜ ನಾಯ್ಕಡರವರಿಗೆ ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಗೇರುಸೊಪ್ಪದಿಂದ ಹೊನ್ನಾವರ ತನಕ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಜೆಲ್ಲಿ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಸರಿಪಡಿಸಿ ಹಾಗೂ ಹುಲಿಯಪ್ಪನಕಟ್ಟೆ ಹತ್ತಿರದ ಬಾಳೆಗದ್ದೆ ತಿರುವಿನ ಸಮಸ್ಯೆಯನ್ನು ಕೂಡಾ ಬಗೆಹರಿಸಿ ಎಂದು ಶಾಸಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಎಲ್ಲಾ ಇಲಾಖೆಯ ಅಧಿಕಾರಿಗಳು ಜನರ ಕೆಲಸ ಮಾಡಿಕೊಡಿ, ಜನರ ಮಾತಿಗೆ ಸ್ಪಂದನೆ ಕೊಡಿ, ಹಾರಿಕೆ ಉತ್ತರ ಕೊಡಬೇಡಿ, ಮಾನವೀಯತೆಯಿಂದ ಕೆಲಸ ಮಾಡಿ ಎಂದರು.

CHETAN KENDULI

ಆರೋಗ್ಯ ಇಲಾಖೆಯ ವೈದ್ಯಧಿಕಾರಿ ಉಷಾಹಾಸ್ಯಗಾರ ಕುಷ್ಟರೋಗ, ಕ್ಷಯರೋಗದ ಹಾಗೂ ಇನ್ನಿತರ ವಿಷಯವನ್ನು ಸಭೆಯ ಗಮನಕ್ಕೆ ತಂದರು. ಹೆಚ್ಚು ಜನ ಸಂಖ್ಯೆ ಇರುವಲ್ಲಿ ಹೆಚ್ಚು ಲಸಿಕೆ ಸಿಗುವ ಹಾಗೆ ಮಾಡಿ ಎಂದು ಶಾಸಕರು ಸಲೆ ನೀಡಿದರು. ಇನ್ನೂ ಡಯಾಲಿಸಿಸ್ ಸಮಸ್ಯೆ ಬಗ್ಗೆ ಕೇಳಿದಾಗ ೨ ಮಷೀನ್ ಹಾಳಾಗಿದೆ. ಈಗಾಗಲೇ ಹೋಸ ಮಷೀನ್ ಖರೀದಿಗೆ ಹೊನ್ನಾವರ ಬಿಜೆಪಿ ಮಂಡಳ ೫ ಲಕ್ಷ ರೂಪಾಯಿಗಳನ್ನು ನೀಡಿದೆ, ಉಳಿದ ಹಣದ ವ್ಯವಸ್ಥೆ ಮಾಡಿ ಮಷೀನ್ ಖರೀದಿ ಮಾಡಬೇಕಾಗಿದೆ ಎಂದರು. ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಶೀಘ್ರದಲ್ಲಿ ಆಗುತ್ತದೆ ಎಂದರು.ಕೆಎಫ್ಡಿ ಅಧಿಕಾರಿ ಮಂಗನ ಕಾಯಿಲೆ ನಿಯಂತ್ರಣದ ಬಗ್ಗೆ ಮತ್ತು ಇಲಾಖೆಯ ಇನ್ನಿತರ ಮಾಹಿತಿ ನೀಡಿದರು. ಶಾಸಕರು ಗ್ರಾಮ ಪಂಚಾಯತ ಮಟ್ಟದಲ್ಲಿ ಮಂಗನಕಾಯಿಲೆ ಜಾಗೃತಿ ಮಾಹಿತಿ ಕಾರ್ಯಾಗಾರ ಮಾಡಿ ಸಂಪೂರ್ಣ ಮಾಹಿತಿ ರವಾನೆ ಆಗುವ ಹಾಗೆ ಜಾಗೃತಿ ಕಾರ್ಯಕ್ರಮ ಮಾಡಿ ಎಂದರು.ಶಿಕ್ಷಣ ಇಲಾಖೆಯ ಪ್ರಭಾರಿ ಬಿ.ಇ.ಓ ಎಸ್ ಎಮ್ ಹೆಗಡೆ ಮಾತನಾಡಿ ಸರಕಾರದ ನಿಯಮಾವಳಿಯಂತೆ ಸೋಮವಾರ ಒಂಬತ್ತು ಮತ್ತು ಹತ್ತನೇ ತರಗತಿ ಪ್ರಾರಂಭವಾಗಿದೆ. ಕೋವಿಡ್ ಜಾಗ್ರತೆ ವಹಿಸಲಾಗಿದೆ. ಎಲ್ಲಾ ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ ಎಂದರು.ವಿದ್ಯಾರ್ಥಿಗಳಿಗೆ ನೀರಿನ ತೊಂದರೆ ಆಗದ ಹಾಗೆ ನೋಡಿಕೊಳ್ಳಿ. ಹಳೆ ವಿದ್ಯಾರ್ಥಿಗಳ ಸಹಕಾರ ಪಡೆದುಕೊಳ್ಳಿ, ಮುಖ್ಯ ಶಿಕ್ಷಕರಿಗೆ ಪೂರ್ವ ವಿದ್ಯಾರ್ಥಿಗಳ ಸಹಕಾರ ಪಡೆದುಕೊಳ್ಳಲು ಸಲಹೆ ಕೊಡಿ ಎಂದು ಹೇಳಿದರು.

ಹೆಸ್ಕಾಂ ಇಲಾಖಾ ಅಧಿಕಾರಿ ಇಲಾಖೆಗೆ ಸಂಬAಧ ಪಟ್ಟ ಮಾಹಿತಿ ನೀಡಿದರು. ಮೆಟ್ನಗದ್ದೆ ವಿದ್ಯುತ್ ಸಮಸ್ಯೆ ಬಗೆಹರಿಸಿ, ವಿದ್ಯುತ್ ಇಲ್ಲದ ಮನೆಯ ಮಾಹಿತಿ ಪಡೆದು ವಿದ್ಯುತ್ ಇಲ್ಲದ ಮನೆಗೆ ತಕ್ಷಣ ವಿದ್ಯುತ್ ನೀಡಿ, ನಗರಬಸ್ತಿಕೇರಿ ಹಾಡಗೇರಿಯಲ್ಲಿ ವಿದ್ಯುತ್ ಲೈನ್ ಮರದ ಕಂಬದಲ್ಲಿದೆ ೧೫ ದಿನದಲ್ಲಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು.ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಣ್ಣಿನ ಗಿಡಗಳನ್ನು ಹೆಚ್ಚೆಚ್ಚು ಹಾಕಿ, ಊರಿನ ಹತ್ತಿರ ಅಕೇಸಿಯ ಗಿಡಗಳ ಸಂಖ್ಯೆ ಕಡಿಮೆ ಮಾಡಿ ಎಂದರು. ಅಂತ್ಯ ಸಂಸ್ಕಾರಕ್ಕೆ ಆ ಭಾಗದಲ್ಲೇ ಕಟ್ಟಿಗೆ ಸಿಗುವ ವ್ಯವಸ್ಥೆ ಮಾಡಿ, ಹಂದಿ ಮತ್ತು ಮಂಗನ ಕಾಟ ಜಾಸ್ತಿ ಆಗಿದೆ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದರು.ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗೆ ಇಡಗುಂಜಿ ಏತನೀರಾವರಿ ವ್ಯಾಪ್ತಿಯಲ್ಲಿ ಪೈಪ್ ಹೋಲ್ ಮಾಡಿ ಅಕ್ರಮವಾಗಿ ಪೈಪ್ ಅಳವಡಿಸಿಕೊಂಡು ನೀರು ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರು ಅವಕಾಶ ನೀಡಿದ್ದಾರೆ ಎಂಬ ಆರೋಪವಿದೆ. ನನಗೆ ಫೋಟೋ ಸಮೇತ ದೂರು ಬಂದಿದೆ. ಅವರ ಮೇಲೆ ಪ್ರಕರಣ ದಾಖಲು ಮಾಡಿ ನನಗೆ ಮಾಹಿತಿ ನೀಡಿ ಎಂದರು.ಗೋವು ಕಳ್ಳರ ಹಾವಳಿ ಜಾಸ್ತಿ ಆಗಿದೆ. ರಾತ್ರಿ ಗೋವನ್ನು ಕಾರಲ್ಲಿ ತುಂಬುವ ಸಿಸಿ ಕ್ಯಾಮರಾ ಮಾಹಿತಿ ಸಿಕ್ಕಿದೆ. ಅಂತವರ ಮೇಲೆ ಕ್ರಮ ಕೈಗೊಳ್ಳಿ, ನೈಟ್ ಬೀಟ್ ಜಾಸ್ತಿ ಮಾಡಿ ಎಂದು ಪೊಲೀಸ್ ಇಲಾಖೆಗೆ ತಿಳಿಸಿದರು.ಸಾರಿಗೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಜಾಸ್ತಿ ಆಗಿದೆ. ಜನರಿಗೆ ವಿಳಂಬವಾಗುತ್ತಿದೆ. ದಲ್ಲಾಳಿಗ ಹಾವಳಿ ನಿಲ್ಲಿಸಿ ಎಂದರು.ಅಗ್ನಿ ಶಾಮಕ ಇಲಾಖೆಗೆ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನೀರು ತುಂಬಿಸಲು ಅವಕಾಶ ನೀಡಲು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದರು.ಪ್ರಾರಂಭದಲ್ಲಿ ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಂದ ಗೇರುಸೊಪ್ಪದ ಭೂಮಿಕಾ ನಾಯ್ಕಳನ್ನು ಸನ್ಮಾನ ಮಾಡಲಾಯಿತು. ಸಭೆಯಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ್ ಮೇಸ್ತ, ತಾಲೂಕಾ ಪಂಚಾಯತ ಆಡಳಿತ ಅಧಿಕಾರಿ ವಿನೋದ ಅಳ್ವೆಕರ್, ತಹಸೀಲ್ದಾರ ನಾಗರಾಜ ನಾಯ್ಕಡ ಮತ್ತು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಪಿ. ಎಲ್. ಡಿ ಬ್ಯಾಂಕ್ ಅಧ್ಯಕ್ಷರು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*