ರಾಜ್ಯ ಸುದ್ದಿಗಳು
ದೇವನಹಳ್ಳಿ
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಅಂಗೀಕರಿಸಿ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ನೀಡುವುದರ ಮೂಲಕ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.ಕರ್ನಾಟಕ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದೇವರಾಜ.ಜಿ.ಎನ್. ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ರಾಜ್ಯ ಸರಕಾರವು ರಚಿಸಿರುವ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಆಯೋಗದ ಜನಗಣತಿ ವರದಿಗಳನ್ನು ಕೂಡಲೇ ಸದನದಲ್ಲಿ ಅಂಗೀಕರಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನ ಅರುಣ್‌ಮಿಶ್ರಾ ತೀರ್ಪಿನಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು.
ಬಗರ್‌ಹುಕ್ಕುಂ ಸಕ್ರಮೀಕರಣ ಸಮಿತಿಯಲ್ಲಿ ಎಸ್‌ಸಿ/ಎಸ್‌ಟಿ ವರ್ಗಗಳ ಅರ್ಜಿಗಳು ವಜಾಗೊಂಡಿರುವುದನ್ನು ಪುನರ್ ಪರಿಶೀಲಿಸಲು ಸರಕಾರ ಆದೇಶ ಹೊರಡಿಸಬೇಕು ಹಾಗೆಯೇ ಭೂ ಮಂಜೂರಾತಿ ನಿಯಮ ೧೯೬೯ರ ಪ್ರಕಾರ ಪರಿಶಿಷ್ಟ ಜಾತಿ/ವರ್ಗಗಳಿಗೆ ಶೇ.೫೦ರಷ್ಟು ಭೂಮಿ ಮೀಸಲಿಡಲು ಹಾಗೂ ಭೂಮಿ ಹಂಚಿಕೆ ಮಾಡಬೇಕು. ಪರಿಶಿಷ್ಟ ಜಾತಿ/ವರ್ಗ ಭೂ ಪರಭಾರೆ ನಿಷೇಧ ಕಾಯ್ದೆಯ(ಪಿಟಿಸಿಎಲ್) ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ಧ ರಾಜ್ಯ ಸರಕಾರ ಕೂಡಲೇ ಸುಗ್ರಿವಾಜ್ಞೆ ತಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಹೀಗೆ ೧೬ ಅಂಶಗಳನ್ನು ಒಳಗೊಂಡಂತ ಬೇಡಿಕೆಗಳನ್ನು ಕೂಡಲೇ ಸರಕಾರ ಈಡೇರಿಸುವಂತಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಎಸ್.ಡಿ.ಮುನಿರಾಜು, ದೇವನಹಳ್ಳಿ ಸುರೇಶ್.ಎಸ್.ಎನ್., ಜಿಲ್ಲಾ ಖಜಾಂಚಿ ಅತ್ತಿವಟ್ಟ ರಾಜಪ್ಪ, ಹೊಸಕೋಟೆ ತಾಲೂಕು ಸಂಚಾಲಕ ನರಸಿಂಹಮೂರ್ತಿ, ಖಜಾಂಚಿ ಫಯಾಜ್‌ಯನಗುಂಟೆ, ವಿಜಯಪುರ ಟೌನ್ ಅಧ್ಯಕ್ಷ ನಾಗಾರ್ಜುನ್, ದೇವನಹಳ್ಳಿ ತಾಲೂಕು ಸಂಚಾಲಕ ಅರಳೂರು ನರಸಿಂಹಯ್ಯ, ದೊಡ್ಡಬಳ್ಳಾಪುರ ತಾಲೂಕು ಸಂಚಾಲಕ ಶೇಖರ್, ಮುಖಂಡರಾದ ಜಗದೀಶ್, ಕಾಚಳ್ಳಿ ರಾಮಕೃಷ್ಣಪ್ಪ, ಮುನಿರಾಜು, ನರಸಿಂಹಪ್ಪ, ಬೂದಿಹಾಳ ಮುನಿಕೃಷ್ಣಪ್ಪ, ಸೇರಿದಂತೆ ಹಲವಾರು ಇದ್ದರು.
Be the first to comment