ಕೆಪಿಎಸ್ ಶಾಲೆಗೆ ಮಕ್ಕಳ ಅದ್ದೂರಿ ಸ್ವಾಗತ…!! ಕೋವಿಡ್ ನಿಯಮ ಪಾಲನೆಯಲ್ಲಿ ಶಿಸ್ತಿನ ಸಿಪಾಯಿಗಳಾದ ಮಕ್ಕಳು…!!!

ವರದಿ: ಹೈದರ್‌ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

ದೇವನಹಳ್ಳಿ:

CHETAN KENDULI

ಸರಕಾರ ಕೋವಿಡ್ ಮೂರನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ೯ ಮತ್ತು ೧೦ನೇ ತರಗತಿ ಮಕ್ಕಳಿಗೆ ಶಾಲೆ ಪ್ರಾರಂಭಿಸಲು ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮೊದಲ ದಿನದಲ್ಲಿ ಶಾಲಾ ಮಕ್ಕಳು ಬಹಳ ಉತ್ಸುಕದಿಂದ ಆಗಮಿಸಿದರು.

ಸರಕಾರದ ಕೊರೊನಾ ನಿಯಮಗಳನ್ನು ಪಾಲಿಸುವುದರ ಮೂಲಕ ಮಕ್ಕಳು ಶಿಸ್ತಿನ ಸಿಪಾಯಿಗಳಂತೆ ಸಾಲುಗಟ್ಟಿ ಶಾಲೆಯೊಳಗೆ ಹೆಜ್ಜೆ ಹಾಕಿದರು. ವಿಶ್ವನಾಥಪುರ ಕೆಪಿಎಸ್ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ ಗುಲಾಬಿ ಹೂವು ಮತ್ತು ನೋಟ್‌ಪುಸ್ತಕ ನೀಡುವುದರ ಮೂಲಕ ಬರಮಾಡಿಕೊಂಡರು. ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಹಾಗೂ ಪ್ರತಿ ವಿದ್ಯಾರ್ಥಿಗೆ ಸ್ಕ್ರೀನಿಂಗ್ ಮಾಡುವುದರ ಮೂಲಕ ಶಾಲೆಯೊಳಗೆ ಕಳುಹಿಸಿಕೊಡಲಾಗಿತ್ತು. ಕೋವಿಡ್ ಹರಡದಂತೆ ಮುಂಜಾಗೃತವಾಗಿ ಪ್ರತಿ ಡೆಸ್ಕ್‌ಗೆ ೨ ವಿದ್ಯಾರ್ಥಿಗಳಂತೆ, ಒಂದು ಕೊಠಡಿಗೆ ೧೫ ರಿಂದ ೨೦ ವಿದ್ಯಾರ್ಥಿಗಳನ್ನು ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಕರು ಮೊದಲ ದಿನದಲ್ಲಿ ಕೊರೊನಾ ಜಾಗೃತಿ ಮೂಡಿಸುವುದರ ಮೂಲಕ ಗಮನಸೆಳೆದರು.

ಕೆಪಿಎಸ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಗಂಗೋತ್ರಿ ಮಾತನಾಡಿ, ಕೋವಿಡ್‌ನಿಂದಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಸಿಗುತ್ತಿರಲಿಲ್ಲ. ನಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ನಿಯಮ ಪಾಲಿಸಿ ಮಹಾಮಾರಿ ಕೊರೊನಾವನ್ನು ಓಡಿಸಬೇಕು. ಇದೀಗ ಶಾಲೆ ಆರಂಭಿಸಿರುವುದು ನಮಗೆಲ್ಲ ಹೆಚ್ಚು ಖುಷಿಯಾಗುತ್ತಿದೆ ಎಂದರು.

ವಿಶ್ವನಾಥಪುರ ಕ್ಲಸ್ಟರ್ ಸಿಆರ್‌ಪಿ ಜ್ಯೋತಿಕುಮಾರ್ ಮಾತನಾಡಿ, ಒಂದೂವರೆ ವರ್ಷದಿಂದ ಕೋವಿಡ್‌ನಿಂದಾಗಿ ಶಾಲೆಗಳು ತೆರದಿರಲಿಲ್ಲ. ಇಲಾಖೆಯ ಸುತ್ತೋಲೆಯಂತೆ ಶಾಲೆ ಪ್ರಾರಂಭಿಸಲಾಗಿದೆ. ವಿಶೇಷ ರೀತಿಯಲ್ಲಿ ಬ್ಯಾಂಡ್‌ಸೆಟ್ ಮೂಲಕ ಮಕ್ಕಳಿಗೆ ಸ್ವಾಗತಿಸಲಾಗುತ್ತಿದೆ. ಇಲಾಖೆಯ ಸೂಚನೆಯಂತೆ ಕೊರೊನಾ ನಿಯಮಗಳ ಮುನ್ನಚ್ಚರಿಕೆಯಲ್ಲಿ ಶಾಲೆಗೆ ಮಕ್ಕಳನ್ನು ಬರಮಾಡಿಕೊಡಲಾಗುತ್ತಿದೆ ಎಂದರು.

Be the first to comment

Leave a Reply

Your email address will not be published.


*