ರಾಜ್ಯ ಸುದ್ದಿಗಳು
ಮುದ್ದೇಬಿಹಾಳ(ವಿಜಯಪುರ ಜಿಲ್ಲೆ):
ಒಂದು ಕಡೆ ಆಗಸ್ಟ್ 15 ಮದ್ಯ ರಾತ್ರಿ ಅಖಂಡ ಭಾರತ ಧ್ವಜಾರೋಹನಕ್ಕೆ ಸಜ್ಜಾಗುತ್ತಿದ್ದರೆ ಸಮಾಜದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಸೇವೆಯಲ್ಲಿ ತೊಡಗಿರುವ ಪಟ್ಟಣ ಪಂಚಾಯತ ನೌಕರರು ಮಾತ್ರ ಗಢದ್ದಾಗಿ ಮದ್ಯ ಸೇವಿಸಿ ಬಾಡೂಟದಲ್ಲಿ ತೊಡಗಿದ್ದು ದುರಾದುಷ್ಟಕರ ಸಂಗತಿಯಾಗಿದೆ. ಅದರಲ್ಲೂ ಸಾರ್ವಜನಿಕರಿಗೆ ಪೂರೈಸುವ ಕುಡಿಯುವ ನೀರಿನ ಶುದ್ಧಿಕರಣ ಘಟಕದಲ್ಲಿಯೇ ಇಂತಹ ಕೃತ್ಯಕ್ಕೆ ಮುಂದಾಗಿ ಸರಕಾರದ ಆದೇಶವನ್ನೆ ಉಲ್ಲಂಘನೆ ಮಾಡಿದಂತಾಗಿದೆ.
ಹೌದು, ಬಾಡೂಟದಲ್ಲಿ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಪಂಚಾಯತಿಯ ದ್ವಿತೀಯ ದರ್ಜೆ ಸಹಾಯಕ ಬಿ.ಟಿ.ಹಜೇರಿ, ಪ್ರಥಮ ದರ್ಜೆ ಸಹಾಯಕ ಅನಿಲಕುಮಾರ ಚಟ್ಟೇರ, ಕಿರಿಯ ಆರೋಗ್ಯ ನಿರೀಕ್ಷಕ ಚಂದ್ರಶೇಖರ ಸಗರ, ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿರುವ ಅಕೌಂಟೆಂಟ್ ಜಯಪ್ರಕಾಶ ಸಜ್ಜನ್, ಐಟಿ ಸಿಬ್ಬಂದಿ ಪ್ರಸನ್ನಕುಮಾರ ಅವಟಿ ಬಾಡೂಟದಲ್ಲಿ ಭಾಗಿಯಾಗಿದ್ದವರು. ಇವರು ನಾರಾಯಣಪೂರ ರಸ್ತೆಯಲ್ಲಿರುವ ನೀರು ಶುದ್ಧೀಕರಿಸುವ ಘಟಕದ ಓವರ್ ಹೆಡ್ ಟ್ಯಾಂಕ್ ಕೆಳಗಡೆ ಗುಂಡು ತುಂಡು ಪಾರ್ಟಿಗೆ ಸ್ಥಳ ಗುರುತಿಸಿಕೊಂಡು ಗಡದ್ದಾಗಿ ಊಟ ಮಾಡಿದ್ದಾರೆ. ಅಲ್ಲದೇ ಈ ವಿಷಯ ಮಾಧ್ಯಮದವರಿಗೆ,ಸಂಘಟನೆಯವರಿಗೆ ತಿಳಿಯುತ್ತಲೇ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಎಸ್‌ಡಿಸಿ ಬಿ.ಟಿ.ಹಜೇರಿ, ಮದ್ಯದ ಗುಂಗಿನಲ್ಲಿಯೇ ನನಗೆ ನಾಲತವಾಡ ಸಾಕಾಗಿದೆ. ಏನಾದರೂ ಒಂದು ಆರೋಪ ಮಾಡಿ ಸಸ್ಪೆಂಡ್ ಮಾಡಿಸಿ ಎಂದು ಕೈ ಮುಗಿದು ಗೋಗರೆದಿದ್ದಾನೆ.
ವರದಿಗೆ ತೆರಳಿದ್ದ ಪತ್ರಕರ್ತನಿಗೆ ಗಾಯ :
ನೀರು ಶುದ್ಧೀಕರಣ ಘಟಕದಲ್ಲಿ ಬಾಡೂಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವರದಿಗೆಂದು ತೆರಳಿದ್ದ ಅಂಬಿಗ್ ನ್ಯೂಸ್ ಪತ್ರಕರ್ತ ಕಾಶೀನಾಥ ಬಿರಾದಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸ್ಥಳದಿಂದ ಪರಾರಿಯಾಗುವ ವೇಳೆ ಧಾವಿಸಿ ಚಿತ್ರ ಸೆರೆ ಹಿಡಿಯುವ ಸಂದರ್ಭದಲ್ಲಿ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ.ಸದ್ಯಕ್ಕೆ ಪತ್ರಕರ್ತ ಕಾಶೀನಾಥ,ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ಎಲುಬು ಮೂಳೆ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ನೌಕರರ ದುರ್ವರ್ತನೆಗೆ ವ್ಯಾಪಕ ಆಕ್ರೋಶ :
ನಾಲತವಾಡದ 40 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಈ ರೀತಿ ಸರಕಾರದ ಆದೇಶ ಗಾಳಿಗೆ ತೂರಿ ಬಾಡೂಟ ಮಾಡಿರುವ ಪಟ್ಟಣ ಪಂಚಾಯಿತಿ ನೌಕರರ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡಿಎಸ್‌ಎಸ್ ಮುಖಂಡ ಯಲ್ಲಪ್ಪ ಚಲವಾದಿ ಮಾತನಾಡಿ, ನೀರು ಶುದ್ಧೀಕರಣ ಘಟಕದಲ್ಲಿ ಕಾವಲು ಕಾಯ್ದು ಜನರಿಗೆ ಶುದ್ಧ ಕುಡಿವ ನೀರು ಪೂರೈಸಬೇಕಾದ ಪಟ್ಟಣ ಪಂಚಾಯಿತಿ ನೌಕರರೇ ಸರಕಾರಿ ಜಾಗೆಯನ್ನು ತಮ್ಮ ಸ್ವಂತದ್ದೆಂಬಂತೆ ಗುಂಡು, ತುಂಡು ಪಾರ್ಟಿ ಮಾಡಿರುವುದು ಖಂಡನೀಯವಾಗಿದೆ. ಇಂತಹ ಬೇಜವಾಬ್ದಾರಿತನದ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
“ನಾಲತವಾಡದ ನೀರು ಶುದ್ಧೀಕರಣ ಘಟಕದಲ್ಲಿ ನಮ್ಮ ಪಟ್ಟಣ ಪಂಚಾಯಿತಿ ನೌಕರರೇ ಬಾಡೂಟದಲ್ಲಿ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. ಬೇಜವಾಬ್ದಾರಿತವಾಗಿ ಮಾತನಾಡಿರುವ ಹಜೇರಿ ಎಂಬ ಅಧಿಕಾರಿಗೆ ಹಾಗೂ ಅವರೊಂದಿಗೆ ಇದ್ದ ಸಿಬ್ಬಂದಿಗಳಿಗೆ ನನ್ನ ಅಧಿಕಾರದ ವ್ಯಾಕ್ತಿಯಲ್ಲಿ ಕ್ರಮ ಜರುಗಿಸುತ್ತೇನೆ.”
-ಸುರೇಖಾ ಬಾಗಲಕೋಟ,ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ ನಾಲತವಾಡ
Be the first to comment