ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ನಮ್ಮ ಸೈನಿಕರು ದೇಶ ಕಾಯುವ ಜೊತೆಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹದ್ದು ಎಂದು ಕಾರಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಸ್‌ಟಿಸಿ-ಬೆಂಗಳೂರು (ಬಿಎಸ್‌ಎಫ್) ವತಿಯಿಂದ ಕೆ.ಸಿ.ಜನರಲ್ ಆಸ್ಪತ್ರೆ ರಕ್ತನಿಧಿ ಮತ್ತು ಡ್ಯಾಪ್ಕೋ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಸೈನಿಕರಿಗೆ ಅಭಿನಂದನಾ ಪತ್ರವನ್ನು ವಿತರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆ ವಿರಳವಾಗುತ್ತಿದೆ. ರಕ್ತದಾನ ಮಾಡುವುದರಿಂದ ತೀರ ಅವಶ್ಯಕತೆ ಇರುವ ಮತ್ತು ಪ್ರಾಣಾಪಯದಿಂದ ಇರುವವರಿಗೆ ಈ ರಕ್ತವನ್ನು ನೀಡುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಲು ಸಹಕಾರಿಯಾಗುತ್ತದೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಆರ್.ಜಯರಾಮ್ ಮಾತನಾಡಿ, ರಕ್ತವನ್ನು ಯಾರು ಸೃಷ್ಠಿಸಲಾರರು, ಸ್ವಯಂ ದೇಹದಲ್ಲಿ ಉತ್ಪತ್ತಿಯಾಗುವ ರಕ್ತಕಣಗಳನ್ನು ದಾನ ಮಾಡಿದರೆ, ಹೊಸ ರಕ್ತ ಕಣಗಳು ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. ಆರೋಗ್ಯ ಸಮತೋಲನ ಕಾಪಾಡಲು ಹಾಗೂ ರೋಗ-ರುಜಿನುಗಳಿಂದ ದೂರವಿರಲು ಇಂತಹ ಶಿಬಿರಗಳು ಸಾಕಷ್ಟು ಅನುಕೂಲವಾಗಲಿದೆ ಎಂದರು.
ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯೆ ಡಾ.ಸುನಿತಾ ಮಾತನಾಡಿ, ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಸೈನಿಕರು ಗಡಿಯಲ್ಲಿ ದೇಶ ರಕ್ಷಣೆ ಮಾಡುವುದಲ್ಲದೆ, ಇಂತಹ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ದೇಶಪ್ರೇಮವನ್ನು ಮೆರೆದಿದ್ದಾರೆ. ಇವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರಹಳ್ಳಿ ಪಿಎಚ್‌ಸಿ ವೈದ್ಯ ಡಾ.ಧನಂಜಯ್ ಮಾತನಾಡಿ, ಬಿಎಸ್‌ಎಫ್ ಅವರಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವುದಕ್ಕೆ ಹಿರಿಯ ಅಧಿಕಾರಿಗಳಿಗೆ ವಿನಂತಿಸಿದಾಗ ಅವರು ತ್ವರಿತವಾಗಿ ಸಹಕರಿಸಿ, ರಕ್ತದಾನ ಶಿಬಿರವನ್ನು ಏರ್ಪಡಿಸಿಕೊಟ್ಟಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಎಸ್‌ಎಫ್ ಕ್ಯಾಂಪಸ್ ಇರುವುದರಿಂದ ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.
ಶಿಬಿರದ ಕಾರ್ಯಕ್ರಮವನ್ನು ಬೆಂಗಳೂರು ಇನ್ಸ್‌ಪೆಕ್ಟರ್ ಜನರಲ್ ಜಾರ್ಜ್ ಮಂಜುರಾಮ್ ಮಾರ್ಗದರ್ಶನದಲ್ಲಿ ಬಿಎಸ್‌ಎಫ್ ಸಿಐಎಟಿ ಸ್ಕೂಲ್‌ನ ಕಮಾಂಡೆಂಟ್ ಯೋಗೇಶ್‌ಕುಮಾರ್ ಉದ್ಘಾಟಿಸಿದರು. ರಕ್ತದಾನ ಮಾಡಿದ ಪ್ರತಿ ಸೈನಿಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ರಾಜಣ್ಣ, ಕೆಂಪಣ್ಣ, ಮುಖಂಡರಾದ ಎನ್.ರವಿ, ಶಶಿಕುಮಾರ್, ತಾಜ್‌ಪೀರ್, ಚಿಕ್ಕಣ್ಣ, ಜೋಸೇಫ್, ಅಶೋಕ್‌ಕುಮಾರ್, ಎಂಪಿಸಿಎಸ್ ನಿರ್ದೇಶಕ ಮುನೇಗೌಡ, ಕಾರಹಳ್ಳಿ ಪಿಎಚ್‌ಸಿ ಲ್ಯಾಬ್ ಟೆಕ್ನಿಷಿಯನ್ ಭಾನುಶ್ರೀ, ಆರೋಗ್ಯ ಸಿಬ್ಬಂದಿ ಮಮತಾ, ರತ್ನಮ್ಮ, ಕಾರಹಳ್ಳಿ ಬಿಎಸ್‌ಎಫ್ ಯೋಧರು ಇದ್ದರು.
Be the first to comment