ಕೊರೊನಾ ಬಿಕ್ಕಟ್ಟಿನಿಂದಾಗಿ ಕಳೆಗುಂದಿದ ಸ್ವಾಂತಂತ್ರ್ಯ ದಿನಾಚರಣೆ…! ಮಹಾನೀಯರ ಹೆಗ್ಗುರುತಿನ ದ್ಯೋತಕ ಈ ಇಂಡಿಪೆಂಡೆನ್ಸ್ ಡೇ…!!!

ವರದಿ: ಹೈದರ್‌ಸಾಬ್ ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ ೭೪ ವರ್ಷ ಗತಿಸಿದೆ. ಆ.೧೫, ೭೫ನೇ ಸ್ವಾತಂತ್ರ್ಯೋತ್ಸವ. ಈ ಹಿಂದೆ ೭೪ ಬಾರಿ ವಿಜೃಂಭಣೆಯಿಂದ ನಡೆದಿದ್ದ ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಕೊರೋನಾ ಬಿಕ್ಕಟ್ಟಿನಿಂದಾಗಿ ಕಳೆಗುಂದಿದೆ. ಸಾರ್ವಜನಿಕರು ಗುಂಪು ಸೇರದೇ ಇಂಡಿಪೆಂಡೆನ್ಸ್ ಡೇ ಆಚರಣೆ ನಡೆಯುತ್ತಿರುವುದು ಇದೇ ಮೊದಲು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.



ತಾಲೂಕಿನ ಬೊಮ್ಮವಾರ ಸಮೀಪದ ನಿರ್ಮಿತಿ ಕೇಂದ್ರದಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ವಜ್ರಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ೧೭೫೭ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳಾಗಿ ಭಾರತಕ್ಕೆ ಬಂದು ಅಧಿಕೃತವಾಗಿ ಅಧಿಪತ್ಯ ಸ್ಥಾಪಿಸಿ, ಪ್ಲಾಸಿ(ಪಲಾಶಿ) ಕದನದಲ್ಲಿ ಬಂಗಾಳ ನವಾಬ ಸಿರಾಜ್-ಉದ್-ದೌಲಾ ಮತ್ತವರ ಫ್ರೆಂಚ್ ಮೈತ್ರಿ ಸೇನೆಯನ್ನು ಬ್ರಿಟಿಷರು ಸೋಲಿಸಿದರು. ಅದಾದ ಬಳಿಕ ಆಫ್ಘಾನಿಸ್ತಾನದಿಂದ ಹಿಡಿದು ಮಯನ್ಮಾರ್‌ವರೆಗೆ ಬಹುತೇಕ ಎಲ್ಲಾ ಪ್ರದೇಶಗಳು ಬ್ರಿಟಿಷರ ಕೈವಶವಾಗುತ್ತದೆ. ಇದಕ್ಕೆ ೧೭೫೭ರ ಪ್ಲಾಸಿ ಕದನವೇ ಇದಕ್ಕೆ ನಿರ್ಣಾಯಕವಾಗುತ್ತದೆ. ಆದರೆ, ಬ್ರಿಟಿಷರ ೧೯೦ ವರ್ಷಗಳ ಆಡಳಿತ ಸುಗಮವಾಗಿಯೇನೂ ಇರಲಿಲ್ಲ. ಅಲ್ಲಲ್ಲಿ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಹೋದವು. ಮಹಾತ್ಮ ಗಾಂಧಿ ಅವರಂಥವರ ಅಹಿಂಸಾತ್ಮಕ ಹೋರಾಟಗಳು; ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಹೋರಾಟ; ಭಗತ್ ಸಿಂಗ್ ಅವರಂಥವರ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪಥವನ್ನು ಸುಗಮಗೊಳಿಸಿದವು. ವಿಶ್ವಮಹಾಯುದ್ಧಗಳಲ್ಲಿ ಜರ್ಝರಿತಗೊಂಡಿದ್ದ ಬ್ರಿಟಿಷರಿಗೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹೆಚ್ಚು ಕಾಲ ಅದುಮಿಡಲೂ ಸಾಧ್ಯವಿರಲಿಲ್ಲ. ಅಂತಿಮವಾಗಿ ೧೯೪೭, ಆಗಸ್ಟ್ ೧೫ರಂದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು. ಆದರೆ, ಅದಕ್ಕೆ ಮುಂಚೆ ಭಾರತ ಮತ್ತು ಪಾಕಿಸ್ತಾನವನ್ನು ಧರ್ಮದ ಆಧಾರವಾಗಿ ಪ್ರತ್ಯೇಕಗೊಳಿಸಿದರು. ಮುಸ್ಲಿಮ್ ಬಾಹುಳ್ಯ ಇದ್ದ ಭಾರತದ ಪಶ್ಚಿಮ ಭಾಗವನ್ನು ಹಾಗೂ ಪೂರ್ವ ಬಂಗಾಳ ಇರುವ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ಮಾಣ ಮಾಡಲಾಯಿತು. ತಮ್ಮ ಆಡಳಿತ ಸುಗಮವಾಗಿ ನಡೆಯಲೆಂದು ಬ್ರಿಟಿಷರು ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಭೇದ ನೀತಿ ತಂದಿದ್ದರು. ಅದರ ಫಲವಾಗಿ ಎರಡೂ ಸಮುದಾಯಗಳ ಮಧ್ಯೆ ವೈಷಮ್ಯ ನೆಲಸೇ ಇತ್ತು. ಇದು ಅಂತಿಮವಾಗಿ ಭಾರತದ ವಿಭಜನೆಗೂ ಕಾರಣವಾಯಿತು. ವಿಭಜನೆ ವೇಳೆ ದೊಡ್ಡ ಮಟ್ಟದಲ್ಲಿ ಹಿಂಸಾಚಾರಗಳು ನಡೆದವು. ಸ್ವಾತಂತ್ರ್ಯ ಹೋರಾಟ, ಆಂತರಿಕ ಹಿಂಸಾಚಾರಗಳ ಮಿಶ್ರಣದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ೧೯೪೭ರಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡವು ಎಂದು ವಿವರಿಸಿದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕುಮಾರ್ ಮಾತನಾಡಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ೧೯೪೭ ಆಗಸ್ಟ್ ೧೫ರಂದು ಕೆಂಪುಕೋಟೆಯಲ್ಲಿ ಭಾರತದ ನೂತನ ರಾಷ್ಟ್ರಧ್ವಜವನ್ನು ಹಾರಿಸಿ, ನಂತರ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಆ ಬಳಿಕ ಭಾರತೀಯ ಸೇನಾ ಪಡೆಗಳ ಪಥ ಸಂಚಲನ ಇತ್ಯಾದಿ ನಡೆದವು. ಈ ಪರಂಪರೆಯು ವರ್ಷದಿಂದ ವರ್ಷಕ್ಕೆ ಪಾಲನೆಯಾಗುತ್ತಲೇ ಬಂದಿದೆ. ಈ ಬಾರಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಇರುವ ಹಿನ್ನೆಲೆಯಲ್ಲಿ ಸೀಮಿತವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ವೇಳೆಯಲ್ಲಿ ನಿರ್ಮಿತಿ ಕೇಂದ್ರದ ಸಿಬ್ಬಂದಿಗಳು, ಇಂಜಿನೀಯರ್‍ಸ್ ಇದ್ದರು.

 

Be the first to comment

Leave a Reply

Your email address will not be published.


*