ರಾಜ್ಯ ಸುದ್ದಿಗಳು
ದೇವನಹಳ್ಳಿ
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವುದೇ ಸಮಯದಲ್ಲೂ ಘೋಷಣೆಯಾಗಬಹುದಾಗಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಸದಾ ಸಿದ್ಧರಾಗಿರಬೇಕು ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಹೇಳಿದರು.
ಹೋಬಳಿಯ ಬಿಜ್ಜವಾರ ಗ್ರಾಮದಲ್ಲಿ ಆಯೋಜಿಸಿದ್ದ ಕಾರಹಳ್ಳಿ(ಬಿಜ್ಜವರ) ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ವೆಂಕಟಗಿರಿಕೋಟೆ ತಾಲ್ಲೂಕು ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣೆಗಳನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರ, ಕೋರ್ಟ್ ಮೊರೆಹೋಗಿತ್ತು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಕೆಲಸಗಳಾಗಿವೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ಒಂದು ಕುಟುಂಬಕ್ಕೆ 30 ಕೆ.ಜಿ.ಅಕ್ಕಿ ಕೊಡುತ್ತಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇವಲ ಒಬ್ಬ ಫಲಾನುಭವಿಗೆ 3 ಕೆ.ಜಿಗೆ ಇಳಿಕೆ ಮಾಡಿದರು. ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಿ, ಅವರ ನೆರವಿನಿಂದ ಸರ್ಕಾರ ನಡೆಸುತ್ತಿದ್ದಾರೆ.
ಇಂದಿರಾಗಾಂಧಿ ಅವರ ಅವಧಿಯಲ್ಲಿ ಜಾರಿಗೆ ತಂದಿದ್ದ 20 ಅಂಶಗಳ ಕಾರ್ಯಕ್ರಮಗಳು ಕಾಂಗ್ರೆಸ್ ಪಾಲಿಗೆ ಭಗವದ್ಗೀತೆ ಇದ್ದಂತೆ, ಅದರಲ್ಲಿನ ಯೋಜನೆಗಳನ್ನು ವೀರೇಂದ್ರಪಾಟೀಲ್, ಬಂಗಾರಪ್ಪ, ವೀರಪ್ಪಮೊಯಿಲಿ ಅವರು ಮುಂದುವರೆಸಿಕೊಂಡು ಬಂದಿದ್ದರು. ಬಗರ್ ಹುಕ್ಕುಂ ಸಾಗುವಳಿ ಮಾಡುವ ಬಡವರಿಗೆ ಭೂಮಿ ಕೊಡುವುದು, ರೈತರಿಗಾಗಿ ಅನೇಕ ಕಾರ್ಯಕ್ರಮಗಳು ಜಾರಿಗೆ ತಂದಿದ್ದರು. ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆಯನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ, ಈ ಯೋಜನೆಗಳಿಗೆ 220 ಎಂ.ಎಲ್.ಡಿ.ಬದಲಿಗೆ ಕೇವಲ 80 ಎಂ.ಎಲ್.ಡಿ. ನೀರು ಬರುತ್ತಿದೆ. ಇದರಿಂದ ಈ ಭಾಗದ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಪಕ್ಷದ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ತಾಲ್ಲೂಕಿನ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದಿದ್ದರೂ ಕೂಡಾ ಕೋಟ್ಯಾಂತರ ರೂಪಾಯಿಗಳ ಅನುದಾನಗಳನ್ನು ತಂದಿದ್ದೇನೆ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಮಾಡುವವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಿಕೊಂಡು ಹಣ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಮಾಡುತ್ತಿಲ್ಲ. ಜಾಲಿಗೆಯಲ್ಲಿ ಅವರ ಪಕ್ಷದ ಮುಖಂಡರೇ ಹೇಳಿದ್ದಾರೆ. ಮಾಡಿರುವ ರಸ್ತೆಗಳ ಮೇಲೆ ಪುನಃ ಕಾಂಕ್ರೀಟ್ ಹಾಕಿಸಿ ಹಣ ಮಾಡಿಕೊಂಡಿದ್ದಾರೆ. ಅವರ ದುರಾಡಳಿತದ ಕುರಿತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಾವು ಗೆಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಈ ಭಾಗಕ್ಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ಭಾಗದಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟನೆ ಮಾಡಬೇಕು ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯವಾಗಲ್ಲ. ಬಡವರು, ಅಲ್ಪಸಂಖ್ಯಾತರು, ದೀನದಲಿತರ ಏಳಿಗೆಗಾಗಿ ಕೆಲಸ ಮಾಡಬೇಕಾದರೆ ಅದು ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮೈ ಮರೆಯದಂತೆ ಕೆಲಸ ಮಾಡುವ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡುವಂತಹ ಕೆಲಸ ಮಾಡಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಚೇತನ್ ಗೌಡ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುವಂತೆ ಮಾಡಿದ್ದು, ಕಾಂಗ್ರೆಸ್, ಆದರೆ, ಜೆಡಿಎಸ್ ನವರು ನಾವೇ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಮ್ಮ ಭಾಗಕ್ಕೆ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಬೇಕು ಎಂದು ನಾವೆಲ್ಲರೂ ಹೋರಾಟ ಮಾಡಲಿಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಪಕ್ಷದ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದರು.ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿಚಿನ್ನಪ್ಪ ಮಾತನಾಡಿ, ಕಳೆದ 5 ವರ್ಷಗಳ ಅವಧಿಯಲ್ಲಿ ಜನರು ಈ ಭಾಗದಿಂದ ಆಯ್ಕೆ ಮಾಡಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಸಂತೃಪ್ತಿ ಇದೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳೇ ನಮಗೆ ಮುಂದಿನ ಚುನಾವಣೆಗೆ ಶ್ರೀರಕ್ಷೆಯಾಗಲಿವೆ ಎಂದರು.ಬಾಕ್ಸ್ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಮ್ಮ ಮಾತನಾಡಿ, ಹಳ್ಳಿಗಳಲ್ಲಿ ನಾವೆಲ್ಲರೂ ಪಕ್ಷಕ್ಕಾಗಿ ಪ್ರಾಯಾಸ ಪಡುತ್ತೇವೆ. ಆದರೆ, ಚುನಾವಣೆಯ ಸಮಯದಲ್ಲಿ ನಿಮಗೇನಾಗುತ್ತದೋ ಗೊತ್ತಿಲ್ಲ. ನಿಮ್ಮಲ್ಲಿನ ಒಳಜಗಳಗಳಿಂದ ಪಕ್ಷಕ್ಕೆ ಅನ್ಯಾಯ ಮಾಡ್ತೀರಿ, ಈಗಲಾದರೂ ಒಗ್ಗಟ್ಟಾಗಿದ್ದು, ನಿಮ್ಮ ಮರ್ಯಾದೆ ಉಳಿಸಿಕೊಂಡು ನಮ್ಮ ಮರ್ಯಾದೆಯನ್ನೂ ಉಳಿಸಬೇಕು ಎಂದರು.ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುದುಗುರ್ಕಿ ನಾರಾಯಣಸ್ವಾಮಿ, ವಕೀಲ ಭೈರೇಗೌಡ, ಕೆ.ಸಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ರಾಮಚಂದ್ರಪ್ಪ, ಪ್ರಸನ್ನಕುಮಾರ್, ಜಗನ್ನಾಥ್ ಮಾತನಾಡಿದರು.ಮುಖಂಡರಾದ ಚಿನ್ನಪ್ಪ, ಮರಿತಮ್ಮಣ್ಣ, ರಂಗಣ್ಣ, ಎಸ್.ಆರ್.ರವಿಕುಮಾರ್, ಚೌಡಪ್ಪನಹಳ್ಳಿ ಲೋಕೇಶ್, ಲಕ್ಷ್ಮಣಗೌಡ, ಹಾರೋಹಳ್ಳಿ ರಘು, ಬುಳ್ಳಹಳ್ಳಿ ರಾಜಪ್ಪ, ಶಿವಾನಂದ, ಮುನಿಕೆಂಪಣ್ಣ, ಹೊಲೇರಹಳ್ಳಿ ಮುನಿಯಪ್ಪ, ಮುನಿರಾಜು, ಮಂಜುನಾಥ್, ಇದ್ದರು.
Be the first to comment