ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಇರಲಿ ಎಚ್ಚರಿಕೆ ಸಾರ್ವಜನಿಕರು ಸಕಾಲದಲ್ಲಿ ಮಾಹಿತಿಯನ್ನು ನೀಡಬೇಕು: ಇನ್ಸ್‌ಪೆಕ್ಟರ್ ಜೆ.ರಮೇಶ್

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಅಕ್ರಮ ಮದ್ಯಮಾರಾಟ, ಗಾಂಜಾ ಮಾರಾಟ, ಅಥವಾ ಸೇವನೆ ಮಾಡುವವರು, ಜನರಿಗೆ ವಂಚನೆ, ಮಾನಸಿಕ ಕಿರುಕುಳ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ವಾರ್ನಿಂಗ್ ಮಾಡುವಂತದ್ದು ಕಂಡು ಬಂದರೆ ಸಾರ್ವಜನಿಕರು ನೇರವಾಗಿ ಠಾಣೆಗೆ ದೂರು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಇನ್ ಸ್ಪೆಕ್ಟರ್ ಜೆ.ರಮೇಶ್ ಹೇಳಿದರು.ಪಟ್ಟಣದ ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗದ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಮಾಸಿಕ ಜನಸಂಪರ್ಕ ದಿವಸ ಸಭೆಯಲ್ಲಿ ಅವರು ಮಾತನಾಡಿದರು. ಭಯಮುಕ್ತ ವಾತಾವರಣ ಸೃಷ್ಟಿಸಬೇಕು. ಅಪರಾಧ ತಡೆ ಮಾಸಾಚರಣೆ ಸೇರಿದಂತೆ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ೧೦೦ ಮಂದಿಯಲ್ಲಿ ಇಬ್ಬರು ಅಪರಾಧವೆಸಗಿ ಪೊಲೀಸರಿಗೆ ಭಯಪಡುತ್ತಿರಬಹುದು. ಪೊಲೀಸರೆಂದರೆ ಭಯ ಪಡುವುದು ಬೇಡ. ನಾವು ನಿಮ್ಮೊಂದಿಗೆ ಇದ್ದೇವೆ. ಪೊಲೀಸರ ಮೇಲೆ ಜನರಿಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲಾಗುತ್ತಿದೆ. ಮಾದಕ ವಸ್ತುಗಳು ಹಾಗೂ ಮದ್ಯಪಾನ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಯಾವುದೇ ಅಪರಾಧ ಕೃತ್ಯಗಳಾದರೂ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕಿದೆ. ಸಮಾಜದಲ್ಲಿ ಸಾರ್ವಜನಿಕರ ಆಸ್ತಿ, ಪಾಸ್ತಿಗಳ ರಕ್ಷಣೆ, ಮಾನ, ಪ್ರಾಣದ ರಕ್ಷಣೆ ಮಾಡುವುದಷ್ಟೆ ಅಲ್ಲದೆ, ಜನರು ನಿರ್ಭಿತಿಯಿಂದ ನೆಮ್ಮದಿಯಿಂದ ಜೀವನ ಮಾಡುವಂತೆ ನೋಡಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯವಾಗಿದೆ. ಇದಕ್ಕೆ ಜನರ ಸಹಕಾರವೂ ಅಗತ್ಯವಾಗಿದೆ. ಯಾರಾದರೂ ಅನುಮಾನಾಸ್ಪದವಾಗಿ ಸಂಚರಿಸುವುದು, ಕಂಡು ಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

CHETAN KENDULI

ಮಾಜಿ ಪುರಸಭಾ ಅಧ್ಯಕ್ಷ ಮೂರ್ತಿ ಮಾತನಾಡಿ, ಕಾಲೋನಿಗಳಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚಾಗಿದೆ. ಇದರಿಂದ ಯುವಕರು ಸೇರಿದಂತೆ ಮಹಿಳೆಯರು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುವುದರ ಜೊತೆಗೆ ಅವರ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಲಿದೆ. ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣದಲ್ಲಿ ಕೆಲವರು ಅಲ್ಲಿಗೆ ಬಂದು ಬಸ್ಸಿಗಾಗಿ ಕಾಯುವಂತಹ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಯುವತಿಯರನ್ನು ಚುಡಾಯಿಸುತ್ತಾರೆ. ಅದನ್ನು ನಿಯಂತ್ರಣ ಮಾಡಬೇಕು. ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತೀರಾ ಹದಗೆಟ್ಟಿರುವ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಇಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ವಾಹನಗಳು ಸಕ್ರಮವಾಗಿ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ತಲೆ ಎತ್ತಿರುವ ಜ್ಯೂವೆಲರಿ ಶಾಪ್ ಗಳ ಬಗ್ಗೆ ಪೊಲೀಸ್ ಇಲಾಖೆಯವರು ನಿಗಾವಹಿಸಬೇಕು. ಅವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈಗ ಬಹಳಷ್ಟು ಮಂದಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.ಸಬ್ ಇನ್ ಸ್ಪೆಕ್ಟರ್ ಗಳಾದ ಶಿವಪ್ಪ, ಸಾವಿತ್ರಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಶಂಕರಪ್ಪ, ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

Be the first to comment

Leave a Reply

Your email address will not be published.


*