ರಾಜ್ಯ ಸುದ್ದಿಗಳು
ದೇವನಹಳ್ಳಿ:
ಸುಮಾರು ವರ್ಷಗಳ ಹಿಂದೆ ತಾಲೂಕಿನ ವಿಶ್ವನಾಥಪುರ ಗ್ರಾಮದ ಹೃದಯ ಭಾಗದಲ್ಲಿರುವ ಸರಕಾರಿ ಶಾಲೆಯಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಕರ್ನಾಟಕ ಪಬ್ಲಿಕ್ ಶಾಲೆ ಆದಾಗಿನಿಂದಲೂ ಇಲ್ಲಿದ್ದ ಶಾಲೆಯ ಮಕ್ಕಳನ್ನು ಸ್ಥಳಾಂತರಗೊಳಿಸಲಾಗಿತ್ತು. ಆದರೆ, ಹಳೇ ಶಾಲೆಯ ಜಾಗದಲ್ಲಿ ಯಾವುದೇ ಅಭಿವೃದ್ಧಿಗೊಳಿಸದೆ ಪಾಳು ಬಿದ್ದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಳುಬಿದ್ದಂತಹ ಹಾಗೂ ಅಕ್ರಮ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿರುವ ಶಾಲಾ ಜಾಗವನ್ನು ಶಿಕ್ಷಣ ಇಲಾಖೆ ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಸುಮಾರು ಒಂದೂಕಾಲು ಎಕರೆಯಷ್ಟು ಜಾಗದಲ್ಲಿ ಕಟ್ಟಲಾಗಿರುವ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ಯಾವುದಕ್ಕೂ ಉಪಯೋಗವಾಗದಂತೆ ಅನುಪಯುಕ್ತವಾಗಿ ಉಳಿದುಕೊಂಡಿದ್ದು, ಗ್ರಾಮದ ಹೃದಯ ಭಾಗದಲ್ಲಿರುವುದರಿಂದ ಅಲ್ಲೊಂದು ಕ್ರೀಡಾಂಗಣವಾಗಲೀ, ಸುಸ್ಸಜ್ಜಿತ ಈಜು ಕೊಳವೆಯಾಗಲೀ, ಸುಸುಂದರ ಬೃಂಧಾವನವಾಗಲೀ ಅಥವಾ ಸಾರ್ವಜನಿಕರಿಗೆ ಅನುಕೂಲವಾಗುವಂತಾಗಲೀ ಮಾಡುವುದರಲ್ಲಿ ಅಧಿಕಾರಿಗಳು ನಿರುತ್ಸಾಹ ತೋರುತ್ತಿದ್ದಾರೆ ಎಂದು ಗ್ರಾಮದ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಪಂ ನಿರ್ವಹಣೆಗೆ ಬಿಟ್ಟುಕೊಡಲಿ: ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ವಿಶ್ವನಾಥಪುರ ಗ್ರಾಮ ಪಂಚಾಯಿತಿಗೆ ಈ ಅನುಪಯುಕ್ತ ಜಾಗವನ್ನು ಬಿಟ್ಟುಕೊಟ್ಟರೆ ಯಾವುದಾದರೂ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ಒತ್ತು ನೀಡಲಾಗುತ್ತದೆ. ಗ್ರಾಪಂ ನಿರ್ವಹಣೆಗೆ ಶಿಕ್ಷಣ ಇಲಾಖೆ ಮನಸ್ಸು ಮಾಡಿ ಬಿಟ್ಟುಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಗ್ರಾಪಂಯ ಒತ್ತಾಸೆಯಾಗಿದೆ.
ಗಿಡಗಂಟೆಗಳಿಂದ ಕೂಡಿದ ಜಾಗ: ಶಾಲಾ ಕೊಠಡಿಗಳು ಖಾಲಿ ಖಾಲಿಯಾಗಿದ್ದು, ಶಾಲಾವರಣ ಸಾಕಷ್ಟು ಗಿಡಗಂಟೆಗಳಿಂದ ಕೂಡಿದ್ದು, ರಾತ್ರಿ ಸಮಯದಲ್ಲಿ ಕುಡುಕರಿಗೆ ಅಡ್ಡೆಯಾಗುತ್ತಿದೆ. ಜತೆಗೆ ಯತೆಚ್ಚವಾಗಿ ಗಿಡಗಂಟೆಗಳು ಬೆಳೆಯುತ್ತಿರುವುದರಿಂದ ವಿಪರೀತ ಸೊಳ್ಳೆಗಳು, ಸರಿಸೃಪಗಳು, ಕೀಟಗಳು ಇತರೆ ವಿಷಯುಕ್ತ ಜಂತುಗಳು ಬಂದು ಸೇರಿಕೊಳ್ಳಲು ಅವಕಾಶ ಕಲ್ಪಿಸುವಂತೆ ಆಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ, ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅಲ್ಲೊಂದು ಸುಸ್ಸಜ್ಜಿತ ಕ್ರೀಡಾಂಗಣ ಮಾಡಿದರೆ, ಈ ಭಾಗದ ೧೦ ಹಳ್ಳಿಗಳ ಮಕ್ಕಳಿಗೆ ಮತ್ತು ಕ್ರೀಡಾಸಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಶಾಲೆ ಸ್ಥಳಾಂತರಗೊಂಡು ಸಾಕಷ್ಟು ವರ್ಷಗಳು ಕಳೆದರೂ ಸಹ ಹಳೇ ಶಾಲೆಯನ್ನು ಹಾಗೆಯೇ ಬಿಟ್ಟಿರುವುದು ಅಭಿವೃದ್ಧಿಗೆ ಕಪ್ಪುಚುಕ್ಕೆಯಾಗುತ್ತಿದೆ. ಅದನ್ನು ಕೂಡಲೇ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಅಭಿವೃದ್ಧಿಗೊಳಿಸಬೇಕು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ. ಅಥವಾ ಗ್ರಾಪಂ ನಿರ್ವಹಣೆಗೆ ಬಿಟ್ಟುಕೊಟ್ಟರೆ ಸಮಗ್ರ ಅಭಿವೃದ್ಧಿಗೊಳಿಸಲು ಸಹಕಾರಿಯಾಗಲಿದೆ.
– ನಾರಾಯಣಸ್ವಾಮಿ | ಮುಖಂಡ, ವಿಶ್ವನಾಥಪುರ ಗ್ರಾಮ.
Be the first to comment