ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಸತತವಾಗಿ ಸುಮಾರು 30 ವರ್ಷದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ, ಜನರ ಸಂಕಷ್ಟಗಳಿಗೆ ಸ್ಪಂಧಿಸಿದ ಏಕೈಕ ಸರಕಾರ ಕಾಂಗ್ರೆಸ್ ಸರಕಾರವಾಗಿದೆ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೂತ್ ಮಟ್ಟದ ಪಕ್ಷ ಸಂಘಟನೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕು. ಪಕ್ಷದ ತತ್ವ ಸಿದ್ಧಾಂತಗಳನ್ನು ಪ್ರತಿ ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಆಡಳಿತದಲ್ಲಿ ಆಗಿರುವಂತಹ ಲೆಕ್ಕವಿಲ್ಲದಷ್ಟು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಜತೆಗೆ ಅಭಿವೃದ್ಧಿಗಳ ಪಟ್ಟಿ ಮಾಡಿ ಮೆಲುಕು ಹಾಕಬೇಕು. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮಗಳ ಪ್ರತಿ ಮನೆಗಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಅವರ ಕಷ್ಟಗಳಿಗೆ ಸ್ಪಂಧಿಸಿ ಕೆಲಸ ಮಾಡಬೇಕು. ಪಕ್ಷವನ್ನು ಕಟ್ಟಿ ಬೆಳೆಸುವ ಕೆಲಸವನ್ನು ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಿ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಪ್ರಸ್ತುತ ಜೆಡಿಎಸ್ ಶಾಸಕರಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಾಸಕರು ಕ್ಷೇತ್ರದಲ್ಲಿರಬೇಕಿತ್ತು. ಕಳೆದ ಎರಡನೇ ಅಲೆಯ ಕೋವಿಡ್‌ನಿಂದಾಗಿ ಸಾಕಷ್ಟು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾಕಷ್ಟು ಮಕ್ಕಳು ಅನಾಥರಾಗಿದ್ದಾರೆ. ಯಾವುದೇ ಕೆಲಸಗಳು ಇಲ್ಲದೆ, ಒಂದೊತ್ತಿನ ಊಟಕ್ಕೂ ಅಲೆದಾಡಿದ ಪರಿಸ್ಥಿತಿ ನಾವೆಲ್ಲಾ ನೋಡಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪಕ್ಷ ಎರಡನೇ ಅಲೆಯಲ್ಲಿ ಗ್ರಾಮಗಳಲ್ಲಿ ಮತ್ತು ನಗರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಪಕ್ಷದಿಂದ ಮಾಡಿ, ಜನರಿಗೆ ಆಹಾರದ ದಿನಸಿಕಿಟ್‌ಗಳು, ಮಧ್ಯಾಹ್ನದ ಊಟದ ವ್ಯವಸ್ಥೆ ಹೀಗೆ ಹಲವಾರು ರೀತಿಯಲ್ಲಿ ಸಹಾಯಹಸ್ತ ಚಾಚಿದೆ. ಕಾಂಗ್ರೆಸ್ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಬೇಕಾದರೆ, ಈಗಿನಿಂದಲೇ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ನಮ್ಮ ಪಕ್ಷದವರನ್ನೇ ಗೆಲ್ಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೇಂದ್ರ ಮತ್ತು ಬಿಜೆಪಿ ಸರಕಾರ ಬಂದಾಗಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಜನರು ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ ಎಂದರು.
ಜಿಪಂ ಸದಸ್ಯರಾಗಿದ್ದಾಗ ಬಯಪ್ಪದಲ್ಲಿ ತನ್ನದೇ ಆದಂತಹ ಅನುದಾನವನ್ನು ತಂದು ಕುಂದಾಣ ಜಿಪಂ ಕ್ಷೇತ್ರದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಹಿಂದೆ ಶಾಸಕರು ೧೨ಕೋಟಿ ರೂ. ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟಿದ್ದೇವೆ ಎಂದು ಹೇಳಿರುವುದು ಎಲ್ಲಾ ಸುಳ್ಳು, ಕೋವಿಡ್ ಬಂದ ಸಂದರ್ಭದಲ್ಲಿ ಅವರು ಎಲ್ಲಿದ್ದರು. ನಮ್ಮ ಪಕ್ಷದಿಂದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವೈದ್ಯರಿಗೆ ಸಾಕಷ್ಟು ಪರಿಕರಗಳನ್ನು ವಿತರಿಸಲಾಗಿತ್ತು. ನನ್ನ ಅವಧಿಯಲ್ಲಿ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ಧಿಕೆಲಸಗಳನ್ನು ಮಾಡಲಾಗಿದೆ. ರಾಜ್ಯದ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕೇವಲ ಕಣ್ಣೊರಿಸುವ ತಂತ್ರಗಾರಿಕೆಯಾಗಿದೆ. ಹೆಸರಿಗೆ ಮಾತ್ರ ವ್ಯಕ್ತಿ ಬದಲಾವಣೆಯಾಗಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಜನರು ಬಹಳ ಪ್ರಜ್ಞಾವಂತರಿದ್ದಾರೆ. ಎಲ್ಲವೂ ಅವರಿಗೆ ತಿಳಿಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚು ಬಹುಮತದೊಂದಿಗೆ ಜನರೇ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಲಿದ್ದಾರೆ ಎಂದು ಭವಿಷ್ಯ ನುಡಿದರು.
ಈ ವೇಳೆಯಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಲ್ಲಾ ಎಸ್‌ಸಿ ಕಾಂಗ್ರೆಸ್ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಚೇತನ್‌ಗೌಡ, ತಾಲೂಕು ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಹೋಬಳಿ ಅಧ್ಯಕ್ಷ ಕೋದಂಡರಾಮು, ಖಾದಿಬೋರ್ಡ್ ಅಧ್ಯಕ್ಷ ಎಸ್.ನಾಗೇಗೌಡ, ಮುಖಂಡ ನೆರಗನಹಳ್ಳಿ ನಾಗೇಶ್, ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿವಿಜಯ್‌ಕುಮಾರ್, ಉಪಾಧ್ಯಕ್ಷ ಬಾಲಸುಬ್ರಮಣ್ಯ, ಸದಸ್ಯರಾದ ಮಹೇಶ್ ಬಾಬು, ಆನಂದ್, ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.
Be the first to comment