ವಿದ್ಯುತ್ ದೀಪ ಮುಕ್ತ ಗ್ರಾಮಗಳನ್ನಾಗಿಸಲು ಗ್ರಾಪಂ ಕನಸಿನ ಚಿತ್ತ….! ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ೨ ಗ್ರಾಮಗಳಲ್ಲಿ ಪ್ರಾಯೋಗಿಕ ದೀಪ ಅಳವಡಿಕೆ…!

ವರದಿ: ಹೈದರ್‌ಸಾಬ್ ಕುಂದಾಣ

ಜಿಲ್ಲಾ ಸುದ್ದಿಗಳು

ಬೆಂಗಳೂರು ಗ್ರಾಮಾಂತರ:

CHETAN KENDULI

ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳ ಸದ್ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದ್ದೇ ಆದಲ್ಲಿ, ಆ ಗ್ರಾಮ ಪಂಚಾಯಿತಿಯು ಮಾದರಿಯಾಗುವುದರಲ್ಲಿ ಸಂದೇಹವಿಲ್ಲ ಎಂಬಂತೆ ಸೋಲಾರ್ ದೀಪಗಳ ಅಳವಡಿಕೆಗೆ ಮುಂದಾದ ಗ್ರಾಮ ಪಂಚಾಯಿತಿಗಳಲ್ಲಿ ವಿಶ್ವನಾಥಪುರ ಗ್ರಾಪಂ ಕೂಡ ಒಂದಾಗಿದೆ.

ಬೀದಿ ದೀಪ ನಿರ್ವಹಣೆಯಲ್ಲಿ ಗ್ರಾಪಂಗೆ ವಿದ್ಯುತ್ ಶುಲ್ಕ ಭರಿಸಲು ಸಾಕಷ್ಟು ಕಷ್ಟವಾಗುತ್ತಿದ್ದ ಹಿನ್ನಲೆಯಲ್ಲಿ ಪರ್ಯಾಯವಾಗಿ ಸೌರಶಕ್ತಿಯನ್ನು ಬಳಸಿಕೊಂಡು ಸೌರ ಬೆಳಕು ಚೆಲ್ಲಲು ಇದೀಗ ಗ್ರಾಮಗಳು ಸಜ್ಜಾಗಿದ್ದು, ಗ್ರಾಪಂ ಅನುಷ್ಠಾನಗೊಳಿಸಿ ಎರಡು ಗ್ರಾಮಗಳಲ್ಲಿ ಪ್ರಾಯೋಗಿಕ ಸೋಲಾರ್ ದೀಪ ಮತ್ತು ಹೈಮಾಸ್ಟ್ ದೀಪ ಅಳವಡಿಸಿ ಯಶಸ್ವಿಕಂಡಿದೆ.

ವಿದ್ಯುತ್‌ದೀಪ ಮುಕ್ತ ಸೋಲಾರ್ ದೀಪ ಗ್ರಾಮಗಳಾಗಿ ಬದಲಾಯಿಸಲು ಗ್ರಾಮಪಂಚಾಯಿತಿ ಮೊದಲ ಹೆಜ್ಜೆ ಇರಿಸಿದ್ದು, ಗ್ರಾಮಗಳ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗಿತ್ತು. ಇದರಿಂದ ವಿದ್ಯುತ್ ಶುಲ್ಕ ಸಾಕಷ್ಟು ಕಟ್ಟುವಂತೆ ಗ್ರಾಪಂಗೆ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಇರುವ ಸಂಪನ್ಮೂಲವನ್ನು ಬಳಸಿಕೊಂಡು ಗ್ರಾಪಂಯ ಸರ್ವ ಸದಸ್ಯರ ತೀರ್ಮಾನದಂತೆ, ಪ್ರತಿ ಗ್ರಾಮದಲ್ಲಿ ಸೋಲಾರ್ ಮಾಸ್ಕ್ ಮತ್ತು ಗ್ರಾಮದ ಆಯ್ದ ಸ್ಥಳಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿ ಮಾದರಿ ಮಾಡಲಾಗಿದೆ.

೧೫ನೇ ಹಣಕಾಸು ಬಳಕೆ: ಸರಕಾರದ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಭೈರದೇನಹಳ್ಳಿ ಮತ್ತು ಸೀಕಾಯನಹಳ್ಳಿ ಗ್ರಾಮಗಳಲ್ಲಿ ಸುಮಾರು ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದು, ಸಂಜೆ ೬ ರಿಂದ ಬೆಳಿಗ್ಗೆ ೬ರವರೆಗೆ ಸ್ವಯಂ ಚಾಲಿತ ಸೆನ್ಸಾರ್ ಮೂಲಕ ದೀಪ ಬೆಳಗುವಂತೆ ಖಾಸಗಿ ಕಂಪನಿಯ ಸಹಕಾರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಮತ್ತು ಶೇ.೨೫ರ ಮತ್ತು ವರ್ಗ ೨ರ ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ೧೦ ಗ್ರಾಮಗಳಲ್ಲಿ ಹೈಮಾಸ್ಟ್ ಸೋಲಾರ್ ದೀಪವನ್ನು ಅಳವಡಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ. 

ನಿರ್ವಹಣೆ ಹೇಗೆ? ಅಳವಡಿಸಿರುವ ಸೌರಶಕ್ತಿ ದೀಪಗಳ ನಿರ್ವಹಣೆಯನ್ನು ಎರಡು ವರ್ಷಗಳ ಕಾಲಾವಧಿಯವರೆಗೆ ಖಾಸಗಿ ಕಂಪನಿಯೇ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದು, ೨ ವರ್ಷದ ನಂತರ ಗ್ರಾಪಂ ನಿರ್ವಹಣೆ ಮಾಡಲಿದೆ. ಮೋಲ್ಡೆಡ್ ಬ್ಯಾಟರಿ ಬಳಸಲಾಗಿದ್ದು, ದೀಪವೇನಾದರೂ ಸುಟ್ಟು ಹೋದರೆ, ಅದನ್ನು ಸರಿಪಡಿಸಲು ಅವಕಾಶ ಇರುತ್ತದೆ. ಒಂದು ಬ್ಯಾಟರಿ ಆಯುಷು ೫ ವರ್ಷ ಇದ್ದು, ಎಲ್‌ಇಡಿ ಬಲ್ಪ್ ಹೊಂದಿರುತ್ತದೆ. ಕಂಬದ ಮೇಲಿನ ಭಾಗದಲ್ಲಿ ಅದನ್ನು ಅಳವಡಿಸಿರುವುದರಿಂದ ಕಳುವು ಆಗುವ ಅವಕಾಶ ಇರುವುದಿಲ್ಲ. 

ಗ್ರಾಪಂಯಲ್ಲಿ ಬೀದಿ ದೀಪ ನಿರ್ವಹಣೆಗೆ ವಿದ್ಯುತ್ ದೀಪ ಬಳಕೆಯಲ್ಲಿತ್ತು. ಇದೀಗ ವಿದ್ಯುತ್ ಶುಲ್ಕ ಗ್ರಾಪಂಗೆ ಹೊರೆಯಾಗುತ್ತಿರುವುದರಿಂದ ವಿನೂತವಾಗಿ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ೧೫ನೇ ಹಣಕಾಸು ಯೋಜನೆ ಮತ್ತು ಶೇ.೨೫ ಮತ್ತು ವರ್ಗ ೨ರ ಅನುದಾನದಲ್ಲಿ ಪ್ರತಿ ಗ್ರಾಮಗಳಲ್ಲಿ ಸೌರಶಕ್ತಿ ಉಪಯೋಗಿಸಿಕೊಂಡು ಸೌರ ದೀಪವನ್ನು ಅಳವಡಿಸಲು ಮುಂದಾಗಲಾಗಿದೆ. ಇದರಿಂದ ಗ್ರಾಪಂಗೆ ವಿದ್ಯುತ್ ಶುಲ್ಕ ಕಟ್ಟುವುದು ತಪ್ಪಲಿದೆ. ವೆಚ್ಚವೂ ಸಹ ಕಡಿಮೆಯಾಗಿರುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ ಹೇಳಿದರು. 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಈಗಾಗಲೇ ಪ್ರಾಯೋಗಿಕವಾಗಿ ಸೀಕಾಯನಹಳ್ಳಿ ಮತ್ತು ಬೈರದೇನಹಳ್ಳಿ ಗ್ರಾಮಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದ್ದು, ರಾತ್ರಿ ವೇಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಚೆಲ್ಲುತ್ತಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಇದೊಂದು ಉತ್ತಮ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸೋಲಾರ್ ದೀಪ ಅಳವಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

Be the first to comment

Leave a Reply

Your email address will not be published.


*