ಜಿಲ್ಲಾ ಸುದ್ದಿಗಳು
ಭಟ್ಕಳ:
ಪದವಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಳೆದ ೩ ತಿಂಗಳ ಅವಧಿಯಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ವಿಭಿನ್ನ ರೀತಿಯಲ್ಲಿ ೫-೬ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಟ್ಕಳ ಅಂಜುಮನ್ ಕಾಲೇಜು ಪದವಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿಶ್ವ ವಿದ್ಯಾಲಯವು ಪದವಿ ೧, ೩ ಮತ್ತು ೫ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮಾರ್ಚ-ಏಪ್ರಿಲ್ ತಿಂಗಳಿನಲ್ಲಿ ನಡೆಸದೇ ಮೇ.೧೭ರಿಂದ ೨, ೪, ೬ನೇ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಿರುತ್ತದೆ. ಅಲ್ಲದೇ ಈಗ ಆ.೭ನೇ ತಾರೀಖಿನ ಒಳಗೆ ಪಾಠ ಪ್ರವಚನ ಮುಗಿಸುವುದಾಗಿ ಘೋಷಿಸಿದೆ. ಈ ಹಿಂದೆ ೨,೪ ಹಾಗೂ ೬ನೇ ಸೆಮಿಸ್ಟರ್ ತರಗತಿ ಆರಂಭದಲ್ಲಿ ೧,೩ ಹಾಗೂ ೫ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆ.೨೦ರಿಂದ ಆರಂಭಿಸಿ, ಸೆಪ್ಟೆಂಬರ್ ೨೦ರಿಂದ ೨, ೪ ಹಾಗೂ ೬ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು. ನಂತರ ೨, ೪ ಹಾಗೂ ೬ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬಹು ಆಯ್ಕೆಯ ಮೂಲಕ ಒಂದೂವರೆ ಗಂಟೆ ಅವಧಿಯ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈ ಮಧ್ಯೆ ಯುಜಿಸಿ ಕಳೆದ ವಾರ ಆದೇಶ ಹೊರಡಿಸಿ ಕೇವಲ ಅಂತಿಮ ಸೆಮಿಸ್ಟರ್‌ಗೆ ಮಾತ್ರ ಪರೀಕ್ಷೆ ನಡೆಸಬೇಕು. ಅಲ್ಲದೇ ಮಧ್ಯಂತರ ಸೆಮಿಸ್ಟರ್ ತರಗತಿಯ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳ ಆಧಾರದ ಮೇಲೆ ಮುಂಬಡ್ತಿ ನೀಡಿ ಮುಂದಿನ ತರಗತಿಗೆ ಪ್ರವೇಶ ನೀಡಬೇಕು ಎಂದು ತಿಳಿಸಿದೆ. ಈ ನಡುವೆ ಜು.೨೧ರಂದು ವಿಶ್ವ ವಿದ್ಯಾಲಯವು ಏಕಾಏಕಿ ತನ್ನ ಹಿಂದಿನ ಆದೇಶಗಳನ್ನು ರದ್ದುಗೊಳಿಸಿದೆ. ಇದರ ಜೊತೆಗೆ ಬಹು ಆಯ್ಕೆ ಪದ್ಧತಿಯೂ ರದ್ಧಾಗಿದ್ದು, ವಿಶ್ವ ವಿದ್ಯಾಲಯವು ಪಾಠದ ಅವಧಿಯನ್ನೂ ಕಡಿತಗೊಳಿಸಿ ೧, ೩, ೫ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆ.೧೫ರಿಂದ ಪ್ರಾರಂಭಿಸಿ ಸೆ.೧೫ರಿಂದ ೬ನೇ ಸೆಮಿಸ್ಟರ್ ಪರೀಕ್ಷೆಯನ್ನು ವಿವರಣಾತ್ಮ ಪದ್ಧತಿಯ ಅನುಸಾರ ನಡೆಸುವುದಾಗಿ ಪ್ರಕಟಿಸಿದೆ. ಇದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುವ ಕ್ರಮವಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯವು ಯುಜಿಸಿ ಆದೇಶದನ್ವಯ ಕೇವಲ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಪಠ್ಯಕ್ರಮ ಪೂರ್ತಿಯಾಗಿ ಮುಗಿಯುವ ತನಕ ಪರೀಕ್ಷೆಯನ್ನು ಮುಂದೂಡಬೇಕು. ಪ್ರಾಯೋಗಿಕ ಹಾಗೂ ಆಂತರಿಕ ಪರೀಕ್ಷೆಗೆ ಸೂಕ್ತ ಸಮಯಾವಕಾಶವನ್ನು ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಕುರಿತು ವಿದ್ಯಾರ್ಥಿಗಳು ಕಾಲೇಜು ಪ್ರಾಚಾರ್ಯರು, ತಹಸೀಲ್ದಾರರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರಮುಖರಾದ ಫರ್ವೇಜ್, ಮಹೇಶ, ತಿಲಕ್, ದುರ್ಗೇಶ, ಗಿತೇಶ, ರಝಾಕ್, ತಬ್ರೇಜ್, ಜುಹಾದ್, ಫ್ರಾಜ್, ವಿನಾಯಕ, ಬ್ರ‍್ಯಾನ್ ಲೀಮಾ, ಶೈಲೇಶ, ಪವನ ಮೊದಲಾದವರು ಉಪಸ್ಥಿತರಿದ್ದರು.
Be the first to comment