ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳ ತಾಲೂಕಿನ ಬೈಲೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ನೀಡದೇ ವಂಚಿಸಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಬೈಲೂರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಸಾರ್ವಜನಿಕರೊಂದಿಗೆ ಸೇರಿ ತಹಸೀಲ್ದಾರರಿಗೆ ದೂರು ಸಲ್ಲಿಸಿದ್ದಾರೆ.
ಬೈಲೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಇಲ್ಲಿಯವರೆಗೂ ಆಹಾರದ ಕಿಟ್ ನೀಡಿರುವುದಿಲ್ಲ. ಒಂದು ಪಕ್ಷದ ಕಾರ್ಯಕರ್ತರಿಗೆ ಕಾರ್ಮಿಕರ ಕಿಟ್ ನೀಡಲಾಗುತ್ತಿದೆ ಎನ್ನುವ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಕಾರ್ಮಿಕರಿಗೆ ನೀಡುತ್ತಿರುವ ಆಹಾರದ ಕಿಟ್ ವಿತರಣೆಯ ವಿಷಯದಲ್ಲಿ ಜನಸಾಮಾನ್ಯರು ಪಂಚಾಯತ ಪ್ರತಿನಿಧಿಗಳಿಗೆ ಛಿಮಾರಿ ಹಾಕುತ್ತಿದ್ದಾರೆ. ಕಾರ್ಮಿಕ ಅಧಿಕಾರಿಯು ಆಹಾರ ಕಿಟ್ ವಿತರಣೆಗೆ ಸಂಬಂಧಿಸಿದಂತೆ ಸರಿಯಾದ ವ್ಯವಸ್ಥೆಯನ್ನೇ ರೂಪಿಸದೇ ಇರುವುದು ಇದಕ್ಕೆಲ್ಲ ಕಾರಣವಾಗಿದೆ. ಸಾಲದೆಂಬಂತೆ ಬೈಲೂರು ವ್ಯಾಪ್ತಿಯಲ್ಲಿ ಕೆಲವು ವ್ಯಕ್ತಿಗಳು ಫಲಾನುಭವಿಗಳಿಂದ ಕಾರ್ಮಿಕ ಕಾರ್ಡ ಪ್ರತಿ, ಆಧಾರ ಕಾರ್ಡ, ಜೊತೆಗೆ ಹಣವನ್ನೂ ಪಡೆಯುತ್ತಿರುವ ಬಗ್ಗೆಯೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಬಂದಿದ್ದು, ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೆಯೇ ಅನುಮಾನ ಮೂಡುತ್ತಿದೆ. ಕಾರ್ಮಿಕರ ಆಹಾರ ಕಿಟ್ ಬಗ್ಗೆ ಪಂಚಾಯತಗೂ ಮಾಹಿತಿ ನೀಡುತ್ತಿಲ್ಲ. ಪರಿಣಾಮವಾಗಿ ಫಲಾನುಭವಿಗಳು ಪಂಚಾಯತ ಹಾಗೂ ಕಾರ್ಮಿಕ ಇಲಾಖೆಯ ಕಚೇರಿಗೆ ಅಲೆದಾಡುವಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಾರ್ಮಿಕರಿಗೆ ಆಹಾರ ಕಿಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ಕಾರಣರಾಗಿರುವ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಹಸೀಲ್ದಾರ ಎಸ್.ರವಿಚಂದ್ರ ಮನವಿ ಪತ್ರವನ್ನು ಸ್ವೀಕರಿಸಿದರು. ಬೈಲೂರು ಗ್ರಾಪಂ ಅಧ್ಯಕ್ಷ ಅನಿತಾ ಫರ್ಣಾಂಡೀಸ್, ಉಪಾಧ್ಯಕ್ಷ ಕೃಷ್ಣ ಭಂಡಾರಿ, ಸದಸ್ಯರಾದ ಕೃಷ್ಣ, ರಾಜೇಶ, ಗೀತಾ ಮೊದಲಾದವರು ಉಪಸ್ಥಿತರಿದ್ದರು.
Be the first to comment