ಜಿಲ್ಲಾ ಸುದ್ದಿಗಳು
ಕುಮಟಾ
ಕನ್ಯಾಡಿಯ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಲೋಕ ಕಲ್ಯಾಣಾರ್ಥವಾಗಿ ಚಾತುರ್ಮಾಸ್ಯ ವೃತಾಚರಣೆಯನ್ನು ಜುಲೈ 24 ರಿಂದ ಆರಂಭಿಸಲಿದ್ದಾರೆ ಎಂದು ಶ್ರೀ ರಾಮಕ್ಷೇತ್ರ ಸೇವಾ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಜಿ.ನಾಯ್ಕ ತಿಳಿಸಿದ್ದಾರೆ.ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ನಾಮಧಾರಿ ಸಂಘದ ನಿರ್ದೇಶಕರು, ಪ್ರಮುಖರೆಲ್ಲ ಸೇರಿ ಇತ್ತೀಚೆಗೆ ಹರಿ ಐಕ್ಯರಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯನ್ನು ಸ್ಮರಿಸಿಕೊಂಡು, ಒಂದು ನೀಮಿಷದ ಮೌನಾಚರಣೆ ನಡೆಸುವ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರು ಮಾತನಾಡಿದರು.ನಮ್ಮ ಸಮಾಜದ ಗುರುಗಳಾದ ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಲೋಕ ಕಲ್ಯಾಣಾರ್ಥವಾಗಿ ಚಾತುರ್ಮಾಸ್ಯ ವೃತಾಚರಣೆಯನ್ನು ಗುರುದೇವ ಮಠದಲ್ಲಿ ಜು. 24ರಿಂದ ಆರಂಭಿಸಲಿದ್ದಾರೆ. ಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದಲೇ ನಿರ್ಮಾಣವಾಗಲಿರುವ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ ಕೂಡ ಅಂದೇ ನಡೆಯಲಿದೆ. ಸ್ವಾಮೀಜಿಯ ಭಕ್ತರು ವಿವಿಧ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸಲಿದ್ದಾರೆ. ಅಂತೆಯೇ ನಮ್ಮ ಉತ್ತರಕನ್ನಡ ಜನತೆ ಕೂಡ ಎರಡು ತಿಂಗಳ ಪರ್ಯಂತ ನಡೆಯುವ ಚಾತುರ್ಮಾಸ್ಯ ವೃತಾಚರಣೆಯಲ್ಲಿ ನಿರತರಾದ ಶ್ರೀಗಳ ದರ್ಶನವನ್ನು ಒಮ್ಮೆಯಾದರೂ ಪಡೆದು, ಯತಾ ಸೇವೆ ಸಲ್ಲಿಸಬೇಕೆಂದು ವಿನಂತಿಸಿದರು.
ಅಲ್ಲದೇ, ನಾಮಧಾರಿ ಸೇರಿದಂತೆ ಇತರೆ ಸಮಾಜದ ಅನೇಕರು ಶ್ರೀಗಳ ಭಕ್ತರಿದ್ದಾರೆ. ಶ್ರೀಗಳ ಕಾರ್ಯಕ್ರಮಕ್ಕೂ ಅವರೆಲ್ಲರೂ ಸಹಕಾರ ನೀಡಿದ್ದಾರೆ. ಅವರು ಕೂಡ ಶ್ರೀಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆಯಬಹುದು. ಇನ್ನು ಅನ್ನಛತ್ರ ನಿರ್ಮಾಣ ಮತ್ತು ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ಅಲಂಕರಿಸಿದ್ದು, ಅನ್ನಛತ್ರ ನಿರ್ಮಾಣ ಕಾರ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ಶ್ರೀರಾಮ ಅವರಿಗೆ ಆ ಶಕ್ತಿಯನ್ನು ದಯಪಾಲಿಸುವ ಮೂಲಕ ಕಾಮಗಾರಿಯ ಕಾರ್ಯ ಶೀಘ್ರ ಪೂರ್ಣಗೊಳ್ಳಲಿ ಎಂದು ಹಾರೈಸಿದರು.ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ, ನಮ್ಮ ಸಮಾಜದ ಗುರುಗಳು ಕಳೆದ ವರ್ಷ ಚಾತುರ್ಮಾಸ್ಯ ವೃತಾಚರಣೆ ಕೈಗೊಂಡಾಗ ಕುಮಟಾ ತಾಲೂಕಿನ ಸಮಾಜದ ಪ್ರಮುಖರೆಲ್ಲ ಸೇರಿ ಶ್ರೀಗಳ ದರ್ಶನ ಪಡೆದು, ಯಥಾ ಸೇವೆಯನ್ನು ಸಲ್ಲಿಸಿದ್ದೇವೆ. ಈ ವರ್ಷ ಕೂಡ ಸಮಾಜದ ವತಿಯಿಂದ ಗುರುಗಳಿಗೆ ಸೇವೆ ಅರ್ಪಿಸುವ ಕಾರ್ಯ ಮಾಡುತ್ತೇವೆ. ಸಮಾಜಬಾಂಧವರು ಸಹಕಾರ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘದ ನಿರ್ದೇಶಕರಾದ ಪ್ರಶಾಂತ ನಾಯ್ಕ, ಅಣ್ಣಪ್ಪ ನಾಯ್ಕ, ಸುರೇಶ ನಾಯ್ಕ, ವಿ.ಎಂ.ನಾಯ್ಕ, ನಾಗರಾಜ ನಾಯ್ಕ ಚಿತ್ರಗಿ ಸೇರಿದಂತೆ ಇತರರು ಇದ್ದರು
Be the first to comment