ರಾಜ್ಯ ಸುದ್ದಿಗಳು
ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಲಾಕ್‌ಡೌನ್ ನಿರ್ಬಂಧವನ್ನು ಸಿನಿಮಾ ಮಂದಿರ, ಪದವಿ ಶಿಕ್ಷಣ, ತಾಂತ್ರಿಕ, ಕೌಶಲಾಭಿವೃದ್ಧಿ ತರಬೇತಿ ಸಂಸ್ಥೆಗಳಿಗೆ ಅನ್ವಯಿಸಿದಂತೆ ಷರತ್ತುಬದ್ಧವಾಗಿ ಸಡಿಲಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.ಜಿಲ್ಲೆಯಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಕೋವಿಡ್ ಮಾದರಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು, ರಂಗಮಂದಿರಗಳು, ಸಭಾಂಗಣಗಳು ಮತ್ತು ಸಭಾಂಗಣದಂಥ ಇತರ ಸ್ಥಳಗಳಿಗೆ ಆಸನ ಸಾಮರ್ಥ್ಯದ ಶೇ 50 ರೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಜುಲೈ 26 ರಿಂದ ಮರು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಕೋವಿಡ್ ತಡೆ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ, ಇತರ ಸಿಬ್ಬಂದಿಗೆ ಮಾತ್ರ ಕಾಲೇಜು, ಸಂಸ್ಥೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿಯು ಐಚ್ಛಿಕವಾಗಿರುತ್ತದೆ.ಕೋವಿಡ್ ನಿಯಮ ಪಾಲಿಸಿ ದೀರ್ಘಾವಧಿಯ ತಾಂತ್ರಿಕ ಕೋರ್ಸ್, ಕೌಶಲ ಅಭಿವೃದ್ಧಿ ತರಬೇತಿ ತರಗತಿ ಆರಂಭಿಸಬಹುದು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ, ಇತರ ಸಿಬ್ಬಂದಿ ಕೋವಿಡ್ ತಡೆ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದರೆ ಹಾಜರಾಗಲು ಅನುಮತಿ ನೀಡಲಾಗಿದೆ.ಜುಲೈ 3 ರಂದು ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ಎಲ್ಲ ಆದೇಶಗಳು ಮತ್ತು ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಬರುವ ವ್ಯಕ್ತಿಗಳು ಅನುಸರಿಸಬೇಕಾದ ಕೋವಿಡ್-19 ವಿಶೇಷ ಕಣ್ಗಾವಲು ಕ್ರಮಗಳು ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿವೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
Be the first to comment